ಬೆಂಗಳೂರು: ನಗರದ ಪುಲಕೇಶಿನಗರ(Pulikeshi Nagar) ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡ(Blast) ಪ್ರಕರಣ ತೀವ್ರ ತಿರುವು ಪಡೆದುಕೊಂಡಿದೆ. ಘಟನಾ ಸ್ಥಳದಲ್ಲಿ ಪತ್ತೆಯಾದ ಅಂಶಗಳ ಆಧಾರದ ಮೇಲೆ ಇದು ಇಂಪ್ರೊವೈಸ್ಡ್ ಎಕ್ಸ್ಪ್ಲೋಸಿವ್ ಡಿವೈಸ್(IED) ಸ್ಫೋಟ ಎಂಬ ಶಂಕೆ ವ್ಯಕ್ತವಾಗಿದೆ.
ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ನಿರ್ಮಾಣ ಹಂತದ ಕಟ್ಟಡದ ಸೆಕ್ಯೂರಿಟಿ ಗಾರ್ಡ್ ಅಲ್ಲಾವುದ್ದೀನ್ ಎಂಬಾತನಿಗೆ ಅನಾಮಧೇಯ ಕರೆಯೊಂದು ಬಂದಿತ್ತು. “ಪಾರ್ಸೆಲ್ ಇದೆ, ಅದನ್ನು ತೆಗೆದುಕೊಂಡು ಹೋಗು” ಎಂದು ಕರೆ ಮಾಡಿದ ವ್ಯಕ್ತಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಅಲ್ಲಾವುದ್ದೀನ್, ಕಟ್ಟಡದಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಕಾರ್ಮಿಕನಿಗೆ ವಿಷಯ ತಿಳಿಸಿ ಇಬ್ಬರೂ ಸೇರಿ ಪಾರ್ಸೆಲ್ ಅನ್ನು ಕಟ್ಟಡದ ಐದನೇ ಮಹಡಿಗೆ ತಂದಿದ್ದರು.
ಪಾರ್ಸೆಲ್ ತೆರೆದು, ಅದರಲ್ಲಿದ್ದ ಬ್ಯಾಟರಿಯನ್ನು ಆನ್ ಮಾಡಲು ಮುಂದಾದಾಗ ಏಕಾಏಕಿ ಭೀಕರ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಇಬ್ಬರಿಗೂ ಗಾಯಗಳಾಗಿದ್ದು, ಒಬ್ಬರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದರೆ, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸ್ಥಳದಲ್ಲಿ ಒಂದು ಕವರ್ನಲ್ಲಿ ಮೂರು ಬ್ಯಾಟರಿಗಳು ಸೇರಿದಂತೆ ಐಇಡಿಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿವೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಪುಲಕೇಶಿನಗರ ಠಾಣಾ ಪೊಲೀಸರು ಅಪರಾಧಿಕ ಸಂಚು ಮತ್ತು ಅಕ್ರಮ ಸ್ಫೋಟಕ ಬಳಕೆ ಸಂಬಂಧ ಕಠಿಣ ಸೆಕ್ಷನ್ಗಳಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಬಿಎನ್ಎಸ್ ಸೆಕ್ಷನ್ 61(ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಸೇರಿ ಕ್ರಿಮಿನಲ್ ಸಂಚು ರೂಪಿಸುವುದು), ಸೆಕ್ಷನ್ 3(5)( ಸಮಾನ ಉದ್ದೇಶದಿಂದ ಹಲವರು ಸೇರಿಕೊಂಡು ಅಪರಾಧ ಕೃತ್ಯ ಎಸಗುವುದು), ಸ್ಫೋಟಕ ವಸ್ತುಗಳ ಕಾಯ್ದೆ ಸೆಕ್ಷನ್ 3 ಮತ್ತು 5( ಜೀವ ಅಥವಾ ಆಸ್ತಿಗೆ ಹಾನಿಯುಂಟು ಮಾಡಲು ಸ್ಫೋಟಕ ಬಳಸುವುದು ಹಾಗೂ ಯಾವುದೇ ಪರವಾನಗಿ ಇಲ್ಲದೆ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ತಯಾರಿಸುವುದು ಅಥವಾ ಸಂಗ್ರಹಿಸಿಡುವುದು) ಅಡಿ ಎಫ್ಐಆರ್ ದಾಖಲಾಗಿದೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ನಿನ್ನೆ ಮಧ್ಯಾಹ್ನ ಸಂಭವಿಸಿದ ಬ್ಲಾಸ್ಟ್ ಕುರಿತು ಆಸ್ಪತ್ರೆಯ ಮೂಲಕ ಸಂಜೆ ನಾಲ್ಕು ಗಂಟೆಗೆ ಪೊಲೀಸರಿಗೆ ಮಾಹಿತಿ ತಲುಪಿದೆ. ತಕ್ಷಣವೇ ಪುಲಕೇಶಿನಗರ ಪೊಲೀಸರು, ಉನ್ನತ ಅಧಿಕಾರಿಗಳು, ಭಯೋತ್ಪಾದನಾ ನಿಗ್ರಹ ದಳ (ATC) ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಟ್ಟಡದ 5ನೇ ಮಹಡಿಯಲ್ಲಿ ಬ್ಯಾಟರಿ ಆನ್ ಮಾಡಲು ಹೋದಾಗ ಸ್ಫೋಟ ಸಂಭವಿಸಿದೆ. ಸ್ಫೋಟಗೊಂಡ ಎಲ್ಲಾ ಸ್ಯಾಂಪಲ್ಗಳನ್ನು ಪ್ರತ್ಯೇಕಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದೆ. ಎಟಿಸಿ ತಂಡ ತನಿಖೆ ಚುರುಕುಗೊಳಿಸಿದ್ದು, ಕಟ್ಟಡದ ಮಾಲೀಕನನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸುಮಾರು ಎರಡು ದಿನಗಳ ಹಿಂದೆಯೇ ಈ ಐಇಡಿಯನ್ನು ಕಟ್ಟಡದ ಬಳಿ ತಂದಿಟ್ಟಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಸೆಕ್ಯೂರಿಟಿ ಗಾರ್ಡ್ಗೆ ಕರೆ ಮಾಡಿದ ವ್ಯಕ್ತಿ ಯಾರು? ನಿರ್ಮಾಣ ಹಂತದ ಕಟ್ಟಡವನ್ನೇ ಗುರಿಯಾಗಿಸಿಕೊಂಡಿದ್ದೇಕೆ? ಇದರ ಹಿಂದೆ ವಿಧ್ವಂಸಕ ಕೃತ್ಯದ ಸಂಚು ಇತ್ತೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಪ್ರಕರಣ ಭೇದಿಸಲು ವಿಶೇಷ ತಂಡಗಳನ್ನು ರಚಿಸಿದ್ದಾರೆ.
