ಕನ್ನಡ ಚಿತ್ರರಂಗದ ಕವಿರತ್ನ ಡಾ. ವಿ.ನಾಗೇಂದ್ರ ಪ್ರಸಾದ್ ವಿಜಯ ದಶಮಿ ಹಬ್ಬದ ಪ್ರಯುಕ್ತ, ಉದ್ಯಮಕ್ಕೆ ಶುಭ ಸೂಚಿಸುವ ಲಾಭ ನಿರೀಕ್ಷಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇಂದು ಮುಂಜಾನೆ ಮುದ್ದಿನ ಪಾಳ್ಯದ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ತಮ್ಮದೇ ನಿರ್ದೇಶನದ ಹೊಸ ಚಿತ್ರದ ಮುಹೂರ್ತ ನೇರವೇರಿಸಿದ್ದು, ಚಿತ್ರಕ್ಕೆ ಶುಭಲಾಭ ಎಂದು ಹೆಸರಿಟ್ಟಿದ್ದಾರೆ.
ಶುಭಲಾಭ ಚಿತ್ರದ ಮುಹೂರ್ತದಲ್ಲಿ ಲವ್ಲೀ ಸ್ಟಾರ್ ಪ್ರೇಮ್ ಆರಂಭ ಫಲಕಕ್ಕೆ ಸಾಕ್ಷಿಯಾದ್ರೆ, ಹಿರಿಯ ನಿರ್ದೇಶಕ ಎಸ್. ಮಹೇಂದರ್ ಕ್ಯಾಮೆರಾ ಚಾಲನೆ ನೀಡೋ ಮೂಲಕ ಚಿತ್ರಕ್ಕೆ ಶುಭಕೋರಿದ್ದಾರೆ. ಕವಿರತ್ನ ಡಾ.ವಿ.ನಾಗೇಂದ್ರ ಪ್ರಸಾದ್ ಈ ಬಾರಿ ನಿರ್ದೇಶನದ ಜೊತೆಗೆ ಶುಭಲಾಭ ಚಿತ್ರದ ಮೂಲಕ ಪುತ್ರ ಉತ್ಸವ್ ಪ್ರಸಾದ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸ್ತಿರೋದು ವಿಶೇಷ. ಹಿರಿಯ ನಟ ದತ್ತಣ್ಣ ಬಹು ಮುಖ್ಯಪಾತ್ರದಲ್ಲಿದ್ದು, ಅವರೊಟ್ಟಿಗೆ ಉತ್ಸವ್ ಪ್ರಸಾದ್ ನಾಯಕ ನಟನಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ.
ರಿಯಾ ಕಂಬೈನ್ಸ್ ಲಾಂಛನದ ಅಡಿಯಲ್ಲಿ ಯಮುನಾ ಪ್ರಸಾದ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದರೆ, ವಿಜಯಾನಂದ್ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ವಿ. ಹರಿಕೃಷ್ಣ ಸಂಗೀತ, ಸುರೇಶ್ ಅರಸು ಅವರ ಸಂಕಲನ ಹಾಗೂ ಉಪ್ಪಿ ಛಾಯಾಗ್ರಹಣ ಶುಭಲಾಭಕ್ಕಿದೆ. ಶುಭಲಾಭ ಚಿತ್ರದ ಚಿತ್ರೀಕರಣ ಬಿಜಾಪುರ, ಬದಾಮಿ, ಸಿಂದಗಿ ಬಾಗಲಕೋಟೆ ಭಾಗದಲ್ಲಿ ನಡೆಯಲಿದ್ದು, ಸದ್ಯದಲ್ಲೇ ಚಿತ್ರೀಕರಣಕ್ಕೆ ಚಾಲನೆ ನೀಡುವ ಯೋಜನೆಯಲ್ಲಿದೆ ಚಿತ್ರತಂಡ.

