ಕೋಲ್ಕತ್ತಾ: ದುರ್ಗಾಪೂಜೆ (Durga Puja) ಅಂದ್ರೆ ಕುಟುಂಬದವರು, ಸ್ನೇಹಿತರೊಂದಿಗೆ ಸಂಭ್ರಮದಿಂದ ಹಬ್ಬ ಆಚರಿಸುವ ಸಮಯ. ದೈನಂದಿನ ಬದುಕಿನ ನೋವು ಮರೆತು ಸಂಭ್ರಮಿಸುವ ಈ ಹಬ್ಬವು ಕೋಲ್ಕತ್ತಾದ ಹಲವು ಕುಟುಂಬಗಳಿಗೆ ಮಾತ್ರ ಈ ಬಾರಿ ದುಃಸ್ವಪ್ನವಾಗಿ ಪರಿಣಮಿಸಿದೆ.
ಶನಿವಾರ ತಡರಾತ್ರಿ ಚೋರ್ಬಗನ್ (Chorbagan) ಪ್ರದೇಶದ ದುರ್ಗಾಪೂಜೆ ಪೆಂಡಾಲ್ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 19 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ. ಅದರಲ್ಲೂ ತಾಯಿಯನ್ನ ಕಣ್ಣೆದುರೇ ಕಳೆದುಕೊಂಡ 25 ವರ್ಷದ ಸೋನು ಪಾಲ್ ಅವರ ನೋವು ಮನಕಲಕುವಂತಿದೆ.
ಕುಮೋರ್ತುಲಿ ನಿವಾಸಿಯಾದ ಸೋನು ಪಾಲ್, ದುರಂತ ಸಂಭವಿಸಿದ ರಾತ್ರಿ ತನ್ನ ತಾಯಿಯೊಂದಿಗೆ ಚೋರ್ಬಗನ್ ದುರ್ಗಾಪೂಜೆ ಪೆಂಡಾಲ್ಗೆ ಭೇಟಿ ನೀಡಿದ್ದರು. ಆಘಾತದಿಂದ ಹೊರಬಂದ ಬಳಿಕ ʻನನ್ನ ಕಣ್ಣೆದುರೇ ನನ್ನ ತಾಯಿ ಮೃತಪಟ್ಟರು. ನಾನೂ ಬದುಕುಳಿಯುತ್ತಿರಲಿಲ್ಲʼ ಎಂದು ಗೋಳಾಡಿದ್ದಾರೆ.
ಘಟನೆಯನ್ನು ವಿವರಿಸಿದ ಅವರು, ಕಾಲ್ತುಳಿತ ಸಂಭವಿಸುವ ಸಂದರ್ಭದಲ್ಲಿ ಮಳೆ ಬರುತ್ತಿತ್ತು. ಮಳೆಯಿಂದಾಗಿ ಯಾರೂ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಪ್ರವೇಶದ್ವಾರದ ಬಳಿ ಇದ್ದ ಜನರು ಮಳೆಯಿಂದ ತಪ್ಪಿಸಿಕೊಳ್ಳಲು ಒಳಗೆ ನುಗ್ಗಲು ಶುರು ಮಾಡಿದ್ರು. ಈ ವೇಳೆ ಜನರ ನೂಕುನುಗ್ಗಲು ಹೆಚ್ಚಾಗಿ, ಒತ್ತಡದ ಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಜನಸ್ತೋಮ ಹೆಚ್ಚಾಗಿ ಒಳಗಿದ್ದವರೆಲ್ಲರೂ ಒಬ್ಬರ ಮೇಲೊಬ್ಬರು ಬಿದ್ದರು. ನಾನೂ ಜನರ ಗುಂಪಿನ ಕೆಳಗೆ ಸಿಲುಕಿಕೊಂಡಿದ್ದೆ. ಹೇಗೋ ಸಾವರಿಸಿಕೊಂಡು ನನ್ನ ತಾಯಿಯ ಬಳಿಗೆ ಹೋದೆ. ಆದರೆ, ಅಷ್ಟರಲ್ಲೇ ನನ್ನಮ್ಮ ಅವರು ಮೃತಪಟ್ಟಿದ್ದರು ಎಂದು ಕಣ್ಣೀರಿಟ್ಟಿದ್ದಾರೆ.
ಇನ್ನೂ ಕಾಲ್ತುಳಿತದಲ್ಲಿ ತನ್ನ 30 ವರ್ಷದ ಸಹೋದರಿಯನ್ನ ಕಳೆದುಕೊಂಡ ಶುಭಂ ಸೋಂಕರ್ ಕಣ್ಣೀರಿಡುತ್ತಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಅವರ ಸಹೋದರಿ ಕುಟುಂಬದವರೊಂದಿಗೆ ಚೋರ್ಬಗನ್ಗೆ ಬಂದಿದ್ದರು. ʻಇಂದು ಆಕೆ ನಮ್ಮೊಂದಿಗಿಲ್ಲ. ಇದಕ್ಕೆ ಯಾರು ಹೊಣೆ? ನಮ್ಮ ಗುಂಪಿನಲ್ಲಿದ್ದ ಉಳಿದವರಿಗೆ ಯಾವುದೇ ಗಾಯವಾಗಿಲ್ಲ. ಆದರೆ, ನನ್ನ ಸಹೋದರಿ ಮಾತ್ರ ಬದುಕುಳಿದಿಲ್ಲʼ ಎಂದು ಅಲವತ್ತುಕೊಂಡಿದ್ದಾರೆ.
ಇದೇ ವೇಳೆ, ತನ್ನ ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವ ಸನ್ನಿ ಎಂಬುವವರೂ ಸ್ಥಳೀಯ ಆಡಳಿತಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ರೆ, ಕೆಲವರು ಪೊಲೀಸರ ಕ್ರಮಗಳನ್ನೂ ಪ್ರಶ್ನೆ ಮಾಡಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮದ ಎಚ್ಚರಿಕೆ
ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಜನಸಂದಣಿಯನ್ನು ನಿಯಂತ್ರಿಸುವಲ್ಲಿ ವಿಫಲರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅವರು ಪೂಜಾ ಸಮಿತಿಯ ಸದಸ್ಯರಾಗಿರಬಹುದು, ಗೃಹರಕ್ಷಕ ಸಿಬ್ಬಂದಿಯಾಗಿರಬಹುದು, ತಾತ್ಕಾಲಿಕ ಕೆಲಸಗಾರರಾಗಿರಬಹುದು, ಪೊಲೀಸ್ ಸಿಬ್ಬಂದಿಯಾಗಿರಬಹುದು ಅಥವಾ ಖಾಸಗಿ ಕಂಪನಿಯ ಭದ್ರತಾ ಸಿಬ್ಬಂದಿಯಾಗಿರಬಹುದು. ಯಾರನ್ನೂ ಬಿಡುವುದಿಲ್ಲ ಸಿಎಂ ಸುವೇಂದು ಅಧಿಕಾರಿ ಎಚ್ಚರಿಸಿದ್ದಾರೆ.

