ಮಡಿಕೇರಿ: ಕೊಡಗಿನ ಕುಲದೇವಿ ನಾಡಿನ ಜೀವನದಿ ಮಾತೆ ಕಾವೇರಿ ನಿಗದಿಯಂತೆ ಮೇಷ ಲಗ್ನದಲ್ಲಿ ತೀರ್ಥ ರೂಪಿಣಿಯಾಗಿ ನೆರೆದಿದ್ದ ಸಾವಿರಾರು ಭಕ್ತರಿಗೆ ದರ್ಶನ ನೀಡಿದಳು. ಸಂಜೆ 7:50 ಗಂಟೆಯಿಂದಲೇ ಪ್ರಧಾನ ಅರ್ಚಕ ಗುರುರಾಜ್ ಆಚಾರ್ ಅವರ ನೇತೃತ್ವದಲ್ಲಿ ಸಹಸ್ರ ನಾಮಾರ್ಚನೆ, ಪುಷ್ಪಾರ್ಚನೆ ಮತ್ತು ಕುಂಕುಮಾರ್ಚನೆ ನೆರವೇರಿಸಿದರು.
ಮತ್ತೊಂದೆಡೆ ಕಾವೇರಿ ತೀರ್ಥೋದ್ಭವವನ್ನು (Cauvery Theerthodbhava) ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಭಾಗಮಂಡಲದಿಂದ 8 ಕಿಲೋಮೀಟರ್ ದೂರದ ತಲಕಾವೇರಿವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಭಕ್ತರು ಕಾವೇರಿ ಮಾತೆಯನ್ನು ನೆನೆಯುತ್ತಾ ತಲಕಾವೇರಿ ತಲುಪಿದರು. ಕೊಡಗು ಅಷ್ಟೇ ಅಲ್ಲದೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತರು ತಲಕಾವೇರಿಗೆ ಆಗಮಿಸಿದ್ದರು. ಇದನ್ನೂ ಓದಿ: ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ – ತಲಕಾವೇರಿ ತಲುಪಿದ ದೇವರ ಭಂಡಾರ
ತೀರ್ಥೋದ್ಭವದ ಸಮಯ ಹತ್ತಿರವಾದಂತೆ ಭಕ್ತರ ಹರ್ಷೋದ್ಘಾರ ಹೆಚ್ಚುತ್ತಲೇ ಇತ್ತು. ಉಕ್ಕಿ ಬಾ ತಾಯೆ ಎಂದು ಕಾವೇರಿ ಮಾತೆಯನ್ನು ನೆನೆಯುತ್ತಾ ಭಜಿಸುತ್ತಿದ್ದರು. ನಿಗದಿತ ಸಮಯದಂತೆ ಕಾವೇರಿ ಮಾತೆ ಮೇಷ ಲಗ್ನದಲ್ಲಿ ಇಂದು ಸಂಜೆ 7:50 ಗಂಟೆಗೆ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದಳು. ತೀರ್ಥೋದ್ಭವಾಗುತ್ತಿದ್ದಂತೆ ತೀರ್ಥರೂಪಿಣಿಯಾದ ಕಾವೇರಿ ಮಾತೆಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಸ್ಥಳದಲ್ಲಿದ್ದ ಅರ್ಚಕರು ಭಕ್ತರಿಗೆ ಕಾವೇರಿ ತೀರ್ಥವನ್ನು ಪ್ರೋಕ್ಷಣೆ ಮಾಡಿದರು. ಕಾವೇರಿ ಮಾತೆಯನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ಭಕ್ತಿಭಾವ ಮೆರೆದು ಪುನೀತರಾದರು. ಇದೇ ಸಂದರ್ಭ ಮಾತಾನಾಡಿದ ಸಂಸದ ಯದುವೀರ್, ಕಾವೇರಿ ಸಂಕ್ರಮಣ ಕೊಡಗಿನಲ್ಲಿ ಎಲ್ಲಕ್ಕಿಂತ ವಿಶೇಷ ಹಬ್ಬ ನಾಡಿನ ಜನರಿಗೆ ಅರೋಗ್ಯ ಆಯಸ್ಸು ಕೊಡಲಿ ಎಂದು ವಿಶೇಷವಾಗಿ ಪ್ರಾರ್ಥನೆ ಮಾಡಿದ್ದೇನೆ. ಕಾವೇರಮ್ಮ ಆಶೀರ್ವಾದ ಪಡೆಯಲು ಇಲ್ಲಿಗೆ ಅಗಮಿಸಿದೆ. ಅರಸು ಸಮುದಾಯದಿಂದ ಸಾಂಸ್ಕೃತಿಕ ಉಡುಪು ಹಾಕಿಕೊಂಡು ತಲಕಾವೇರಿಗೆ ಅಗಮಿಸಿದ್ದೇನೆ ಎಂದರು.
ಕಾವೇರಿ ತೀರ್ಥೋದ್ಭವಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ. ವಿರಾಜಪೇಟೆ ಶಾಸಕ ಎಎಸ್ ಪೊನ್ನಣ್ಣ, ಮಡಿಕೇರಿ ಶಾಸಕ ಮಂಥರ್ ಗೌಡ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾವೇರಿ ತೀರ್ಥೋದ್ಭವದಲ್ಲಿ ಭಾಗವಹಿಸಿದರು. ತೀರ್ಥ ಕುಂಡಿಕೆಯ ಬಳಿ ನಿಂತು ಪೂಜೆ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಸಚಿವ ನರೇಂದ್ರ ಸ್ವಾಮಿ, ಕಾವೇರಿ ಮಾತೆಯ ದರ್ಶನ ಬಹಳ ಹತ್ತಿರದಿಂದ ಮಾಡಿದ್ದೇವೆ. ರಾಜ್ಯದಲ್ಲಿ ಉದ್ಭವ ಅಗಿರುವ ನೀರಿನ ಬವಣೆಯನ್ನು ತಾಯಿ ಕಾವೇರಿ ನಿಗಸಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಲೋಕಕಲ್ಯಾಣಕ್ಕಾಗಿ ಧರೆಗಿಳಿದ ಕಾವೇರಿ ಮಾತೆ! – ತಲಕಾವೇರಿಯ ತೀರ್ಥೋದ್ಭವದ ಹಿಂದಿದೆ ಪೌರಾಣಿಕ ಕಥೆ!
