ಮಡಿಕೇರಿ: ಕನ್ನಡ ನಾಡಿನ ಜೀವನಾಡಿ, ದಕ್ಷಿಣ ಭಾರತದ ಜೀವನದಿ ಎಂದೇ ಪ್ರಸಿದ್ಧಿ ಪಡೆದಿರುವ ಪವಿತ್ರ ಕಾವೇರಿ ಮಾತೆಯ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊಡಗು (Kodagu) ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿರುವ ತಲಕಾವೇರಿಯಲ್ಲಿ (Talakaveri Theerthodbhava) ಇಂದು ಸಂಜೆ 7 ಗಂಟೆ 50 ನಿಮಿಷಕ್ಕೆ ಮೇಷ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದೆ.
ಈ ಪುಣ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ತೀರ್ಥೋದ್ಭವದ ಹಿನ್ನೆಲೆಯಲ್ಲಿ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಮತ್ತು ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಕಾವೇರಿ ಕುಂಡಿಕೆಯ ಬಳಿ ಗುರುರಾಜ್ ಆಚಾರ್ಯ ಅವರ ನೇತೃತ್ವದಲ್ಲಿ ಸುಮಾರು 9 ಮಂದಿ ಅರ್ಚಕರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ತಲಕಾವೇರಿಯ ಬ್ರಹ್ಮಕುಂಡಿಕೆ, ಅಗಸ್ತ್ಯೇಶ್ವರ ದೇವಾಲಯ ಹಾಗೂ ಭಾಗಮಂಡಲದ ದೇವಾಲಯಗಳು ವಿದ್ಯುತ್ ದೀಪಗಳು ಮತ್ತು ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿವೆ. ಪವಿತ್ರ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಇಡೀ ಕ್ಷೇತ್ರದಲ್ಲಿ ಭಕ್ತಿಭಾವದ ವಾತಾವರಣ ಮನೆಮಾಡಿದೆ. ತೀರ್ಥೋದ್ಭವದ ಬಳಿಕ ಭಕ್ತರಿಗೆ ತೀರ್ಥ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರ ನಡುವೆ ನೂಕುನುಗ್ಗಲು ಉಂಟಾಗದಂತೆ ಕಾವೇರಿ ಕುಂಡಿಕೆಯ ಸುತ್ತಮುತ್ತ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ರಾತ್ರಿ ವೇಳೆಯಲ್ಲಿಯೂ ಭಕ್ತರಿಗೆ ಅನುಕೂಲವಾಗುವಂತೆ ಹೈಮಾಸ್ಟ್ ದೀಪಗಳು ಹಾಗೂ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ.
ಇತ್ತ ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರಗಳು ನವವಧುವಿನಂತೆ ಸಿಂಗಾರಗೊಂಡಿದ್ದು, ಭಕ್ತರನ್ನು ಸ್ವಾಗತಿಸಲು ಸಜ್ಜಾಗಿವೆ. ಪವಿತ್ರ ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸೇರಿದಂತೆ ಗಣ್ಯರು ಹಾಗೂ ಸಾವಿರಾರು ಭಕ್ತರು ಪುಣ್ಯ ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಕಾವೇರಿ ಮಾತೆಯ ತೀರ್ಥವನ್ನು ಸ್ವೀಕರಿಸಿ ಪುಣ್ಯ ಸಂಪಾದಿಸುವ ಉದ್ದೇಶದಿಂದ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ತೀರ್ಥೋದ್ಭವದ ಸಂದರ್ಭದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಾಲಯದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆಗಳು ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿವೆ.
ಇನ್ನು ತೀರ್ಥೋದ್ಭವ ಹಿನ್ನೆಲೆ ಭಾಗಮಂಡಲ ದೇವಾಲಯದಿಂದ ತಲಕಾವೇರಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ದೇವರ ಭಂಡಾರ ಪೆಟ್ಟಿಗೆ ಆಗಮಿಸಿದೆ. ದೇವ ತಕ್ಕರಾದ ಕೋಡಿ ಕುಟುಂಬಸ್ಥರ ಮುಂದಾಳತ್ವದಲ್ಲಿ ಬಂಡಾರದ ಆಗಮಿಸಿದೆ. ಭಂಡಾರ ಪೆಟ್ಟಿಗೆಯಲ್ಲಿ ಕಾವೇರಿ ತಾಯಿಯ ಅಮೂಲ್ಯ ಆಭರಣಗಳಿವೆ. ಗುಡಿಗೆ ತೊಡಿಸುವ ಬೆಳ್ಳಿಯ ಕವಚವೂ ಭಂಡಾರ ಪೆಟ್ಟಿಗೆಯಲ್ಲಿದೆ. ಅಗಸ್ತ್ಯೇಶ್ವರ ಹಾಗೂ ಗಣಪತಿ ಗುಡಿಗಳಿಗೆ ತೊಡಿಸುವ ಆಭರಣಗಳು ಭಂಡಾರದಲ್ಲಿವೆ.
