ಬಳ್ಳಾರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಚಿರತೆಯೊಂದು(Leopard) ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ(Kudligi) ತಾಲೂಕಿನ ಕಾನಾಹೊಸಹಳ್ಳಿ ಸಮೀಪ ನಡೆದಿದೆ.
ಕಾನಾಹೊಸಹಳ್ಳಿ ಸಮೀಪದ ಬಣವೀಕಲ್ಲು ಹಾಗೂ ಅಮಲಾಪುರ ಗ್ರಾಮಗಳ ನಡುವೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-50ರಲ್ಲಿ (NH-50) ರಸ್ತೆ ದಾಟುತ್ತಿದ್ದ ವೇಳೆ ಚಿರತೆಗೆ ಅಪರಿಚಿತ ವಾಹನ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಚಿರತೆ ರಸ್ತೆಯಲ್ಲೇ ಕೊನೆಯುಸಿರೆಳೆದಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.
ಹೆದ್ದಾರಿಯಲ್ಲೇ ಚಿರತೆ ಪ್ರತ್ಯಕ್ಷವಾಗಿ ಅಪಘಾತಕ್ಕೆ ಈಡಾಗಿರುವುದು ಸುತ್ತಮುತ್ತಲಿನ ಬಣವೀಕಲ್ಲು ಮತ್ತು ಅಮಲಾಪುರ ಗ್ರಾಮಸ್ಥರಲ್ಲಿ ಭೀತಿ ಹೆಚ್ಚಿಸಿದೆ. ಈ ಭಾಗದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳು ಸಂಚರಿಸುತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಜಮೀನು ಹಾಗೂ ತೋಟಗಳಿಗೆ ತೆರಳಲು ರೈತರು, ಸಾರ್ವಜನಿಕರು ಆತಂಕಪಡುತ್ತಿದ್ದಾರೆ. ಅರಣ್ಯ ಇಲಾಖೆ ಈ ಭಾಗದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಘಟನೆಯು ಕಾನಾಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಡಿಕ್ಕಿ ಹೊಡೆದು ಪರಾರಿಯಾದ ವಾಹನದ ಪತ್ತೆಗೆ ಪರಿಶೀಲನೆ ಮುಂದುವರಿದಿದೆ.


