– ಕರ್ನಾಟಕದಲ್ಲಿ ಅಪ್ರಾಪ್ತೆ ಮೇಲೆ ನಡೆದಿರೋ ದೌರ್ಜನ್ಯ ಮುಚ್ಚಿಹಾಕುವ ಯತ್ನ ಅಂತ ಆರೋಪ
ಬೆಂಗಳೂರು: ಸ್ಟಿಂಗ್ ಆಪರೇಷನ್ (Sting Operation) ವಿಡಿಯೋ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಸ್ಟಿಂಗ್ ವಿಡಿಯೋ ಪ್ರಕರಣ ಈಗ ರಾಷ್ಟ್ರೀಯ ಮಹಿಳಾ ಆಯೋಗದ (Womens Commission) ಅಂಗಳ ತಲುಪಿದೆ.
ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನೈಜ ಹೋರಾಟಗಾರರ ವೇದಿಕೆ ದೂರ ನೀಡಿದೆ. ತುರ್ತು ಮಧ್ಯಪ್ರವೇಶಕ್ಕೆ ಆಗ್ರಹಿಸಿ ದೂರು ಸಲ್ಲಿಸಲಾಗಿದೆ.
ಕರ್ನಾಟಕದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಪ್ರಕರಣ ಮುಚ್ಚಿ ಹಾಕುವ ಕುರಿತ ವಿಡಿಯೋ ವೈರಲ್ ಆಗಿದೆ. ಹೀಗಾಗಿ ಈ ವೈರಲ್ ವಿಡಿಯೋ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಈ ವಿಡಿಯೋ ಅಸಲಿಯಾ ನಕಲಿಯ ಅನ್ನುವ ವಿಚಾರದಲ್ಲಿ ಫೊರೆನ್ಸಿಕ್ ತನಿಖೆ ನಡೆಯಬೇಕು.
ಒಂದು ವೇಳೆ ವಿಡಿಯೋ ದಲ್ಲಿದ್ದಂತೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಜೀ ಮಾಡಲು ಮುಚ್ಚಿ ಹಾಕಲು ವ್ಯವಸ್ಥಿತ ಪಿತೂರಿ ಇದ್ರೆ ಕ್ರಮ ಕೈಗೊಳ್ಳಬೇಕು. ಎಸ್ಐಟಿ ಅಥವಾ ಸಿಬಿಐ ತನಿಖೆಗೂ ಆಗ್ರಹಿಸುವಂತೆ ದೂರು ಸಲ್ಲಿಸಲಾಗಿದೆ. ತನಿಖೆಗೆ ಆಗ್ರಹಿಸಿ ರಾಷ್ಟ್ರಪತಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೂ ಪತ್ರ ಬರೆಯಲಾಗಿದೆ.

