ದಾವಣಗೆರೆ: ಪಂಚಮಸಾಲಿ ಮಠಕ್ಕೆ (Panchamasali Mutt) ಸರ್ಕಾರ ನೀಡಿದ್ದ ಹತ್ತು ಕೋಟಿ ರೂ. ಅನುದಾನ ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿಯವರು ಅನುದಾನದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ಮಠದ ಆವರಣದಲ್ಲಿ ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ 2020 – 21ನೇ ಸಾಲಿನಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯಿಂದ ಹತ್ತು ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಅನುದಾನವನ್ನು ಪಂಚಮಸಾಲಿ ಟ್ರಸ್ಟ್ನವರು (Panchamasali Trust) ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಲೆಕ್ಕಕೊಡಿ ಚಳುವಳಿ ಅಧ್ಯಕ್ಷ ಎಂ.ಜಿ ಪರಮೇಶ್ವರ ಗೌಡ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು. ಬಳಿಕ ತನಿಖೆ ಮಾಡಿ ವರದಿ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರು ಸೂಚನೆ ನೀಡಿದ್ದರು.
ಮುಖ್ಯ ಕಾರ್ಯದರ್ಶಿಗಳ ಸೂಚನೆ ಹಿನ್ನೆಲೆ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಆದೇಶದ ಬೆನ್ನಲ್ಲೇ ದಾವಣಗೆರೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ತಂಡ ಮಠಕ್ಕೆ ಭೇಟಿ ನೀಡಿದೆ. ಆದರೆ ದೂರುದಾರ ಎಂ.ಜಿ ಪರಮೇಶ್ವರ ಗೌಡ ಅವರಿಗೆ ಮಾಹಿತಿ ನೀಡದ ಹಿನ್ನೆಲೆ ಅಧಿಕಾರಿಗಳ ತಂಡ ವಾಪಸ್ ಆಗಿದೆ. ಅ.16 ರಂದು ಅಧಿಕಾರಿಗಳು ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

