- 2 ಕೋಟಿ ಅನುದಾನ ಏನಾಯ್ತು ಅಂತ ಪ್ರಶ್ನಿಸಿದ ಜನ
ಮಡಿಕೇರಿ: ಐತಿಹಾಸಿಕ ದಸರಾ ಸಂಭ್ರಮಕ್ಕೆ ಸಾಕ್ಷಿಯಾಗುವ ಮಂಜಿನ ನಗರಿ ಮಡಿಕೇರಿಯಲ್ಲಿ (Madikeri) ಈ ವರ್ಷ ದೀಪಾಲಂಕಾರದ ಕೊರತೆಯಿಂದ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ದಸರಾ (Dasara) ಹಬ್ಬದ ಸಂದರ್ಭದಲ್ಲಿ ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ವಿವಿಧ ಪ್ರದೇಶಗಳು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತವೆ. ಆದರೆ ಈ ಬಾರಿ ಮಾತ್ರ ಮಡಿಕೇರಿ ದಸರಾ ವಿದ್ಯುತ್ ದೀಪಾಲಂಕಾರದ ವಿಚಾರದಲ್ಲಿ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ದಸರಾ ಆಚರಣೆಗೆ ಎರಡು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದರೂ, ಕಳೆದ ವರ್ಷದಂತೆ ನಗರದಲ್ಲಿ ನಿರೀಕ್ಷಿತ ಮಟ್ಟದ ವಿದ್ಯುತ್ ದೀಪಾಲಂಕಾರ ಕಾಣುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಈ ಬಾರಿ ಅಂಬಾರಿ ಹೊರಲಿದ್ದಾನೆ ಪ್ರಶಾಂತ

ಮಡಿಕೇರಿ ದಸರಾ ಕೊಡಗಿನ ಹೆಮ್ಮೆಯೂ ಹೌದು, ಇದು ಐತಿಹಾಸಿಕ ದಸರಾ ಉತ್ಸವದ ತವರೂ ಹೌದು. ನವರಾತ್ರಿಯ ಸಂಭ್ರಮದಲ್ಲಿ ಮಡಿಕೇರಿ ನಗರವೇ ವಿದ್ಯುತ್ ದೀಪಗಳ ಬೆಳಕಿನಲ್ಲಿ ಮಿನುಗಬೇಕಿತ್ತು. ನಗರದ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಬೇಕಿದ್ದ ದೀಪಾಲಂಕಾರ ಪ್ರವಾಸಿಗರನ್ನೂ ಆಕರ್ಷಿಸಬೇಕಿತ್ತು. ಆದರೆ ಈ ಬಾರಿ ದಸರಾ ಸಂಭ್ರಮದ ನಡುವೆಯೇ ವಿದ್ಯುತ್ ದೀಪಾಲಂಕಾರದ ಕೊರತೆ ಎದ್ದು ಕಾಣುತ್ತಿದೆ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ 2025ರ ದಸರಾ ಸಂದರ್ಭದಲ್ಲಿ ನಗರದಲ್ಲಿ ಕಂಗೊಳಿಸಿದ್ದ ವಿದ್ಯುತ್ ದೀಪಾಲಂಕಾರ ಈ ಬಾರಿಯೂ ಇರಲಿದೆ ಎಂಬ ನಿರೀಕ್ಷೆ ಜನರಲ್ಲಿತ್ತು. ಆದರೆ ಈ ಬಾರಿ ನಗರದ ಹಲವು ಭಾಗಗಳಲ್ಲಿ ನಿರೀಕ್ಷಿತ ಮಟ್ಟದ ಅಲಂಕಾರ ಕಾಣುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗುತ್ತಿದೆ. ದಸರಾ ಆಚರಣೆಗೆ ಎರಡು ಕೋಟಿ ರೂಪಾಯಿ ಅನುದಾನ ಬಂದಿದೆ ಎನ್ನಲಾಗುತ್ತಿದೆ. ಹಾಗಾದರೆ ಈ ಅನುದಾನದ ಹೇಗೆ ಬಳಕೆಯಾಗಿದೆ? ಯಾವ ಯಾವ ಕಾರ್ಯಕ್ರಮಗಳಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ? ವಿದ್ಯುತ್ ದೀಪಾಲಂಕಾರಕ್ಕೆ ಎಷ್ಟು ಅನುದಾನ ಮೀಸಲಿಡಲಾಗಿದೆ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಮಡಿಕೇರಿ ದಸರಾ ಎಂದರೆ ಕೇವಲ ಧಾರ್ಮಿಕ ಆಚರಣೆಯಲ್ಲ. ಇದು ಕೊಡಗಿನ ಸಾಂಸ್ಕೃತಿಕ ವೈಭವ, ಪ್ರವಾಸೋದ್ಯಮದ ಆಕರ್ಷಣೆ ಹಾಗೂ ಜಿಲ್ಲೆಯ ಹೆಮ್ಮೆಯ ಪ್ರತೀಕ. ದಸರಾ ಸಂದರ್ಭದಲ್ಲಿ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಮಡಿಕೇರಿಯ ಸೌಂದರ್ಯವನ್ನು ಪರಿಚಯಿಸುವಲ್ಲಿ ವಿದ್ಯುತ್ ದೀಪಾಲಂಕಾರ ಪ್ರಮುಖ ಪಾತ್ರ ವಹಿಸುತ್ತದೆ. ನಗರದ ಪ್ರಮುಖ ರಸ್ತೆ, ವೃತ್ತಗಳು ಹಾಗೂ ಸಾರ್ವಜನಿಕ ಸ್ಥಳಗಳು ಬೆಳಕಿನಿಂದ ಕಂಗೊಳಿಸಿದಾಗ ದಸರಾ ಸಂಭ್ರಮಕ್ಕೆ ಮತ್ತಷ್ಟು ಕಳೆ ಬರುತ್ತದೆ. ಈ ಬಾರಿಯ ದೀಪಾಲಂಕಾರದ ಕೊರತೆ ದಸರಾ ಆಯೋಜನೆಯ ಸಿದ್ಧತೆಗಳ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಎರಡು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದರೆ ಅದರ ಸಮರ್ಪಕ ಬಳಕೆಯ ವಿವರ ಸಾರ್ವಜನಿಕರಿಗೆ ತಿಳಿಯಬೇಕಲ್ಲವೇ? ದಸರಾ ಉತ್ಸವಕ್ಕೆ ಎಷ್ಟು ಹಣ ಬಂದಿದೆ? ಎಷ್ಟು ಹಣ ಖರ್ಚಾಗಿದೆ? ವಿದ್ಯುತ್ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಇತರ ವ್ಯವಸ್ಥೆಗಳಿಗೆ ಎಷ್ಟು ಮೊತ್ತ ವಿನಿಯೋಗಿಸಲಾಗಿದೆ? ಈ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ದಸರಾ ಮಹೋತ್ಸವದಲ್ಲಿ ವಿಂಟೇಜ್ ಕಾರುಗಳ ವೈಭವ

