– ಆರೋಗ್ಯ ಇಲಾಖೆ ವಿರುದ್ಧ ನಿರ್ಲಕ್ಷ್ಯ ಆರೋಪ
ರಾಯಚೂರು: ಬಡ ರೋಗಿಗಳಿಗೆ ತಲುಪಬೇಕಿದ್ದ ಆರೋಗ್ಯ ಇಲಾಖೆಯ ಔಷಧಿಗಳು (Expired Medicines) ತಿಪ್ಪೆ ಪಾಲಾಗಿರುವ ಘಟನೆ ರಾಯಚೂರು (Raichur) ನಗರದಲ್ಲಿ ಬೆಳಕಿಗೆ ಬಂದಿದೆ.
ನಗರದ ಕೋಟೆಯ ಕಂದಕದ ಬಳಿ, ಬಸವೇಶ್ವರ ವೃತ್ತದ ಸಮೀಪ ವಿವಿಧ ಬಗೆಯ ಔಷಧಿಗಳ ಡಬ್ಬಿಗಳನ್ನು ಎಸೆಯಲಾಗಿದೆ. ಔಷಧಿಗಳ ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪತ್ತೆಯಾಗಿರುವ ಔಷಧಿಗಳಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಗಳಿಗೆ ಬಳಸುವ ಮಾತ್ರೆಗಳೂ ಸೇರಿವೆ. ಆರೋಗ್ಯ ಇಲಾಖೆಯಿಂದ ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಲಾಗಿದ್ದ ಈ ಔಷಧಿಗಳು ಬಳಕೆಯಾಗದೆ ಅವಧಿ ಮುಗಿದಿವೆ. ಇದೇ ಸೆಪ್ಟೆಂಬರ್ನಲ್ಲಿ ಅವಧಿ ಮುಗಿದ ಔಷಧಿಗಳೂ ಕಸದ ರಾಶಿಯಲ್ಲಿ ಪತ್ತೆಯಾಗಿವೆ.
ಅವಧಿ ಮೀರಿದ ಔಷಧಿಗಳನ್ನು ನಿಯಮಾನುಸಾರ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕಿತ್ತು. ಆದರೆ, ಸಾರ್ವಜನಿಕರು ಹಾಗೂ ಜಾನುವಾರುಗಳು ಓಡಾಡುವ ಪ್ರದೇಶದಲ್ಲಿ ಔಷಧಿಗಳನ್ನು ಎಸೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಿದ ಔಷಧಿಗಳ ದಾಸ್ತಾನು ಮತ್ತು ನಿರ್ವಹಣೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಇದನ್ನೂ ಓದಿ: ಬಿಹಾರದಲ್ಲಿ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ದುರಂತ; 15 ವರ್ಷದೊಳಗಿನ 13 ಮಕ್ಕಳು ಸಾವು
ರಾಯಚೂರು ನಗರದಲ್ಲಿ ಈ ರೀತಿಯ ಘಟನೆಗಳು ಈ ಹಿಂದೆಯೂ ಹಲವು ಬಾರಿ ನಡೆದಿವೆ. ಮತ್ತೆ ಇಂತಹ ಘಟನೆ ಮರುಕಳಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ರೋಗಿಗಳಿಗೆ ತಲುಪಬೇಕಾದ ಔಷಧಿಗಳು ಬಳಕೆಯಾಗದೆ ವ್ಯರ್ಥವಾಗುತ್ತಿರುವುದಕ್ಕೆ ಹೊಣೆ ಯಾರು ಎಂಬ ಪ್ರಶ್ನೆಯೂ ಮೂಡಿದೆ.ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ತೈಲ ಕಂಪನಿ ಅರಾಮ್ಕೊದ ಮೇಲೆ ಹೌತಿ ಕ್ಷಿಪಣಿ ದಾಳಿ

