ನವದೆಹಲಿ: ಜಂತರ್ ಮಂತರ್ಗೆ(Jantar Mantar) ಅಕ್ರಮ ಪ್ರವೇಶ ಮಾಡಿ ಬಾಂಡ್ ಷರತ್ತು ಉಲ್ಲಂಘಿಸಿದ್ದಕ್ಕೆ ಕಾಕ್ರೋಚ್ ಜನತಾ ಪಾರ್ಟಿಯ (CJP) ಮುಖಂಡರಾದ ಸೌರವ್ ದಾಸ್(Saurav Das) ಮತ್ತು ಅಶುತೋಷ್ ರಾಂಕಾ(Ashutosh Ranka) ಅವರನ್ನು ದೆಹಲಿ ಪೊಲೀಸರು (Delhi Police) ಐದು ದಿನಗಳ ಕಾಲ ತಿಹಾರ್ ಜೈಲಿಗೆ (Tihar Jail) ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ ವಶಕ್ಕೆ ಪಡೆದ ಅಜಿಂಕ್ಯ ಶಿಂಧೆ ಅವರು ಶಾಂತಿ ಬಾಂಡ್ಗೆ ಸಹಿ ಹಾಕಿದ ನಂತರ ಬಿಡುಗಡೆಯಾಗಿದ್ದಾರೆ.
ಬುಧವಾರ ಈ ಮೂವರನ್ನು ಸ್ಪೆಷಲ್ ಎಕ್ಸ್ಕ್ಯೂಟಿವ್ ಮ್ಯಾಜಿಸ್ಟ್ರೇಟ್ (ಎಸ್ಇಎಂ) ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತು. ಅಗತ್ಯ ಬಾಂಡ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅಜಿಂಕ್ಯ ಶಿಂಧೆ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಶನಿವಾರ ನಡೆದಿದ್ದ ಪ್ರತಿಭಟನೆ ವೇಳೆ ವಶಕ್ಕೆ ಪಡೆಯಲಾಗಿದ್ದ ದಾಸ್ ಮತ್ತು ರಾಂಕಾ, ಒಂದು ವರ್ಷದವರೆಗೆ ಶಾಂತಿ ಕಾಪಾಡುವುದಾಗಿ ಬಾಂಡ್ ಬರೆದುಕೊಟ್ಟಿದ್ದರು. ಇದನ್ನೂ ಓದಿ: SIR ಇತ್ತೀಚಿನದ್ದು.. ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣೆಗಳಲ್ಲಿ ಸೋಲುತ್ತಲೇ ಬಂದಿದೆ: ಅಮಿತ್ ಶಾ ವಾಗ್ದಾಳಿ
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಸಿಜೆಪಿ ಕಾನೂನು ಘಟಕದ ಮುಖ್ಯಸ್ಥೆ ರತ್ನಾ ಸಿಂಗ್, ಮುಖಂಡರನ್ನು ಮುಂಜಾನೆ 3:00 ಗಂಟೆಗೆ ಖಾಸಗಿ ವ್ಯಾನ್ನಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆತರಲಾಗಿತ್ತು ಮತ್ತು ತಡರಾತ್ರಿಯವರೆಗೂ ವಕೀಲರನ್ನು ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಕ್ಟೋಬರ್ 11 ರಂದು ದೆಹಲಿ ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್ ಅವರು ರಾಮ್ಲೀಲಾ ಮೈದಾನ, ಬುರಾರಿ ಗ್ರೌಂಡ್ ಮತ್ತು ಸಿಬಿಡಿ ಗ್ರೌಂಡ್ಗಳನ್ನು ಮಾತ್ರ ಪ್ರತಿಭಟನಾ ಸ್ಥಳಗಳಾಗಿ ನಿಗದಿಪಡಿಸಿ, ಜಂತರ್ ಮಂತರ್ ಅನ್ನು ಆ ಪಟ್ಟಿಯಿಂದ ಕೈಬಿಟ್ಟಿದ್ದರು. ಸರ್ಕಾರದ ಈ ಆದೇಶವನ್ನು ತೀವ್ರವಾಗಿ ವಿರೋಧಿಸಿರುವ ಸಿಜೆಪಿ, ತಮ್ಮ ಮುಖಂಡರ ಬಂಧನದ ಬೆನ್ನಲ್ಲೇ ಮುಂದಿನ ಹೋರಾಟದ ರೂಪುರೇಷೆ ಕುರಿತು ಮಹತ್ವದ ಸಭೆ ಕರೆದಿದೆ.
Saurav and Ashutosh sent to 5 days judicial custody.
Ajinkya released on personal bond.
Same grounds of arrest. Got to know that SEM has track record of punishing protesters.
Coward Sarkar.
— Ratna Singh (@whattalawyer) October 14, 2026
ಷರತ್ತು ಏನಿತ್ತು?
ಶನಿವಾರ ವಿಮಾನದ ಒಳಗಡೆಯೇ ಬಂಧನಕ್ಕೆ ಒಳಗಾಗಿದ್ದ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಮುಂದಿನ ಒಂದು ವರ್ಷದವರೆಗೆ (12 ತಿಂಗಳು) ಯಾವುದೇ ರೀತಿಯಲ್ಲಿ ಶಾಂತಿ ಭಂಗ ಉಂಟುಮಾಡುವ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಷರತ್ತು ವಿಧಿಸಿತ್ತು. ಶಾಂತಿ ಮತ್ತು ಉತ್ತಮ ನಡತೆಯನ್ನು ಕಾಯ್ದುಕೊಳ್ಳಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 126 ಮತ್ತು 170 ರ ಅಡಿಯಲ್ಲಿ ತಲಾ 50,000 ರೂ. ಮೊತ್ತದ ಶ್ಯೂರಿಟಿ ಬಾಂಡ್ (Bail Bond) ಅನ್ನು ಪಡೆದುಕೊಳ್ಳಲಾಗಿತ್ತು.

