ಮಂಡ್ಯ: ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ (MANMUL) ನಂದಿನಿ ಹಾಲಿನ ಪುಡಿ ಕಲಬೆರಕೆ (Milk Powder Adulteration) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದ್ದು, ಪೊಲೀಸರು ಮತ್ತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಈ ಹಿಂದೆ ಪ್ರಮುಖ ಆರೋಪಿ ಜಾದವ್ ಹಾಗೂ ಮನ್ಮುಲ್ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿತ್ತು. ಈಗ ಕೇರಳ ಮೂಲದ ಅನಸ್, ತೂಬಿನಕೆರೆಯ ವಿಜೇಶ್, ಮದ್ದೂರಿನ ಅರ್ಪಿತ್ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ನೋಡುಗರ ಕಣ್ಮನ ಸೆಳೆಯುತ್ತಿವೆ ಈ ದಸರಾ ಗೊಂಬೆಗಳು
ಪ್ರಕರಣದ ಪ್ರಮುಖ ಆರೋಪಿ ಜಾದವ್ ಇವರಿಗೆ ಮಾರುಕಟ್ಟೆಗಿಂತ ಕಡಿಮೆ ದರಕ್ಕೆ ನಂದಿನಿ ಹಾಲಿನ ಪುಡಿಯನ್ನು ಸರಬರಾಜು ಮಾಡುತ್ತಿದ್ದ. ಕಳೆದ 2 ವರ್ಷಗಳಿಂದ ಟನ್ಗಟ್ಟಲೆ ಹಾಲಿನ ಪುಡಿ ವಹಿವಾಟು ಅವ್ಯಾಹತವಾಗಿ ನಡೆದಿರುವುದು ತನಿಖೆಯಿಂದ ಬಯಲಾಗಿದೆ. ಇದನ್ನೂ ಓದಿ: ಮಾಜಿ ಸಂಸದ ಪ್ರತಾಪ್ ಸಿಂಹಗೆ ಬಂಧನ ಭೀತಿ
ಬಂಧಿತರಾದ ವಿಜೇಶ್ ಮತ್ತು ಅನಸ್ ಬೇಕರಿ ಉತ್ಪನ್ನಗಳನ್ನು ತಯಾರು ಮಾಡುತ್ತಿದ್ದು, ಹಾಲಿನ ಪುಡಿಯನ್ನು ಬೇಕರಿ ಪದಾರ್ಥಗಳ ತಯಾರಿಕೆಗೆ ಬಳಸುತ್ತಿದ್ದರು. ಇದರ ಜೊತೆಗೆ ಮತ್ತಷ್ಟು ಹಾಲಿನ ಪುಡಿಯನ್ನು ಕೇರಳಕ್ಕೂ ಸಹ ರವಾನೆ ಮಾಡಲಾಗುತ್ತಿತ್ತು. ಪೊಲೀಸರು ಈ ಜಾಲದ ಹಿಂದೆ ಇರುವ ಇತರ ಪ್ರಮುಖ ವ್ಯಕ್ತಿಗಳ ಪತ್ತೆಗಾಗಿ ತನಿಖೆಯನ್ನು ಮುಂದುವರೆಸಿದ್ದಾರೆ. ಇದನ್ನೂ ಓದಿ: ಚಾ.ನಗರ | ಆನೆ ದಾಳಿಗೆ ರೈತ ಬಲಿ

