ಫಸ್ಟ್ rank ರಾಜು ಚಿತ್ರದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗುರುನಂದನ್ ನಾಯಕರಾಗಿ ನಟಿಸಿರುವ ಹಾಗೂ ಪ್ರಸ್ತತ ಭರ್ಜರಿ ಯಶಸ್ಸು ಕಾಣುತ್ತಿರುವ, ಕರ್ನಾಟಕ ಮಾತ್ರವಲ್ಲದೆ ನೆರೆ ರಾಜ್ಯಗಳಲ್ಲೂ ಜಯಭೇರಿ ಬಾರಿಸುತ್ತಿರುವ ಪ್ರೇಮದ ಊರಲಿ ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಛ ನಾಯಕಿಯಾಗಿ ನಟಿಸಿರುವ ಚಿತ್ರ ಮಿಸ್ಟರ್ ಜಾಕ್. ಈ ಸಿನಿಮಾ ಟೀಮ್ ನಿಂದ ಹೊಸ ಅಪ್ ಡೇಟ್ ಬಂದಿದೆ.

ಸುಮಂತ್ ಗೌಡ ನಿರ್ದೇಶನದ ಹಾಗೂ ಮಂಡಿಮನೆ ಟಾಕೀಸ್ ಲಾಂಛನದಲ್ಲಿ ಗುರುನಂದನ್ ಅವರು ತಮ್ಮ ಸ್ನೇಹಿತರೊಡಗೂಡಿ ನಿರ್ಮಾಣ ಮಾಡಿರುವ ಮಿಸ್ಟರ್ ಜಾಕ್ ಚಿತ್ರದ ಮೊದಲ ಹಾಡು ಗಣಪತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ನಾಡಹಬ್ಬ ದಸರಾ ಸಂದರ್ಭದಲ್ಲಿ ಅಕ್ಟೋಬರ್ 19 ರಂದು ಚಿತ್ರದ ಮತ್ತೊಂದು ಹಾಡು ಅನಾವರಣವಾಗಲಿದೆ. ಹೆಸರಾಂತ ಗೀತರಚನೆಕಾರ ಪ್ರಮೋದ್ ಮರವಂತೆ ಬರೆದಿರುವ ಈ ಹಾಡನ್ನು ಖ್ಯಾತ ಗಾಯಕ ಜಸ್ಕರಣ್ ಸಿಂಗ್ ಹಾಡಿದ್ದಾರೆ. ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಟೀಸರ್ ಗೆ ಕೂಡ ಪ್ರಶಂಸೆ ವ್ಯಕ್ತವಾಗಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ.

ತಮ್ಮ ಅಭಿನಯದ ಮೂಲಕ ಜನಪ್ರಿಯರಾಗಿರುವ ಗುರುನಂದನ್ ಹಾಗೂ ಪ್ರೇಮದ ಊರಲಿ ಚಿತ್ರದ ಅಭಿನಯದ ಮೂಲಕ ಎಲ್ಲರ ಮನ ಗೆದ್ದಿರುವ ತಪಸ್ವಿನಿ ಪೂಣಚ್ಛ ಅವರ ಜೋಡಿಯಲ್ಲಿ ಮೂಡಿಬಂದಿರುವ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇದೆ. ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಮಿತ್ರ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್, ಧರ್ಮಣ್ಣ, ಸುಶ್ಮಿತ ಜಗ್ಗಪ್ಪ ಮುಂತಾದವರಿದ್ದಾರೆ. ಶಿವಸೇನ ಛಾಯಾಗ್ರಾಹಕರಾಗಿ ಹಾಗೂ ವಿಜಯ್ ರಾಜ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

