– ಸಿಎಂ ಮಾತ್ರ ಬೇಡಪ್ಪ ಎಂದು ಕೈಮುಗಿದ ಸಿದ್ದು
– ದೇಶದಲ್ಲಿ ಮತ್ತೊಂದು ಕ್ರಾಂತಿ ಆಗಬೇಕಿದೆ ಎಂದು ಕರೆ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇದೀಗ ಸ್ಟಿಂಗ್ ಆಪರೇಷನ್ (Sting Operation) ಕೋಲಾಹಲ ಸೃಷ್ಟಿಸಿದೆ. ಮಾರುವೇಷದ ಕಾರ್ಯಾಚರಣೆ ಆರೋಪ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ವೇದಿಕೆಯಾಗಿದೆ. ಈ ಮಧ್ಯೆ ಮೊದಲ ಬಾರಿಗೆ ಸ್ಟಿಂಗ್ ಆಪರೇಷನ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮೌನ ಮುರಿದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸ್ಟಿಂಗ್ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ. ಯಾರು ಮಾಡ್ತಿದ್ದಾರೆ ಅನ್ನೋ ಸತ್ಯ ಗೊತ್ತಾಗಬೇಕಲ್ಲಾ… ಎಂದು ಹೇಳಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರ ಹೇಳಿಕೆ ಕುತೂಹಲ ಮೂಡಿದೆ. ಸ್ಟಿಂಗ್ ಆಪರೇಷನ್ ರಾದ್ದಾಂತ.. ತನಿಖೆ ಹಂತ ತಲುಪುತ್ತಾ? ಸಿಎಂ ಡಿಕೆಶಿ ಏನ್ ಮಾಡ್ತಾರೆ..? ಏನ್ ಮಾಡ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ಸಿಎಂ ಮಾತ್ರ ಬೇಡಪ್ಪ ಎಂದ ಸಿದ್ದು
ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ ಅವರು, ನನಗೆ 80 ವರ್ಷ ಆಗಿದೆ ಅಂತ ಹಿಂದೇಟು ಹೊಡೆಯಲ್ಲ. ಉಗ್ರಪ್ಪನಿಗೆ 70 ವರ್ಷ ರಾಜಕೀಯದಲ್ಲಿರಲು ಇನ್ನೂ 10 ವರ್ಷ ಇದೆ. ಆದ್ರೆ ನನಗೆ 80 ವರ್ಷ ಆಗಿದೆ ಎಂದರು. ಇದೇ ವೇಳೆ ʻಇನ್ನೊಮ್ಮೆ ಸಿಎಂ ಆಗಬೇಕುʼ ಎಂಬ ಅಭಿಮಾನಿ ಕೂಗಿಗೆ ಓಗೊಟ್ಟು, ಸಿಎಂ ಮಾತ್ರ ಬೇಡಪ್ಪ ಅಂತಾ ನಕ್ಕಿದ್ದಾರೆ.
ಮುಂದುವರಿದು.. ನನ್ನದು ಎಲೆಕ್ಷನ್ ನಿಲ್ಲೋ ವಯಸ್ಸಾ? ರಾಹುಲ್ ಗಾಂಧಿ ರಾಜ್ಯಸಭೆಗೆ ಹೇಳಿದ್ದರು, ಆದ್ರೆ ನಾನು ರಾಜ್ಯಸಭಾ ಸ್ಥಾನ ಬೇಡ ಅಂದೆ. ನನಗೆ ವಯಸ್ಸಾಗಿದೆ, ದೆಹಲಿಗೆ ಬರಲು ಸಾಧ್ಯವಿಲ್ಲ ಅಂದೆ. ಆಗ ವರ್ಕಿಂಗ್ ಕಮಿಟಿ ಮೆಂಬರ್ ಮಾಡಿದ್ರು ಎಂದು ತಿಳಿಸಿದ್ದಾರೆ.
ಇನ್ನೂಂದು ಸ್ವಾತಂತ್ರ್ಯ ಹೋರಾಟ ಆಗಬೇಕಿದೆ
ಇದೇ ವೇಳೆ ಎಸ್ಐಆರ್ ಪ್ರಕ್ರಿಯೆ ವಿರೋಧಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸರ್ವಾಧಿಕಾರ, ಭ್ರಷ್ಟಾಚಾರ ಇದೆ. ಸಂವಿಧಾನಿಕ ಸಂಸ್ಥೆಗಳನ್ನ ಕೈಗೊಂಬೆ ಮಾಡಿಕೊಂಡಿದ್ದಾರೆ. ವೋಟ್ ಕಿತ್ತುಹಾಕುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ನಾವು ಸುಮ್ಮನೆ ಕುಳಿತುಕೊಳ್ಳೋಕೆ ಆಗಲ್ಲ. ಈಗ ಇನ್ನೂಂದು ಸ್ವಾತಂತ್ರ್ಯ ಹೋರಾಟ ಆಗಬೇಕಿದೆ. ಈ ಬಗ್ಗೆ ಕುಳಿತು ಮಾತನಾಡೋಣ. ಸಿಜೆಪಿ, ರಾಹುಲ್ ಗಾಂಧಿ, ಇಂಡಿಯಾ ಒಕ್ಕೂಟ ಕೂಡ ಹೋರಾಟ ಮಾಡುತ್ತಿದೆ. ಮುಂದಿನ ದಿನ ಇದು ಯಾವ ರೀತಿ ಹೋರಾಟ ಆಗಲಿದೆ ಅನ್ನೋದು ಗೊತ್ತಾಗಲಿದೆ. ಜೆಪಿ ಚಳುವಳಿ ನಮಗೆಲ್ಲ ಮಾರ್ಗದರ್ಶನ ಆಗಲಿದೆ. ಯುವಕರು, ವಿದ್ಯಾರ್ಥಿಗಳ ಮೇಲೆ ಪ್ರಭಾವ ಮೀರಿ ಬದಲಾವಣೆ ಕೆಲಸ ಆಗಬೇಕಿದೆ. ದೇಶದಲ್ಲಿ ಬದಲಾವಣೆ, ಕ್ರಾಂತಿ ಆಗಬೇಕಿದೆ. ಮತ್ತೊಂದು ಸಂಪೂರ್ಣ ಕ್ರಾಂತಿಯ ಅವಶ್ಯಕತೆ ಇದೆ ದೇಶದಲ್ಲಿ. ನಮ್ಮ ಸ್ನೇಹಿತರ ಜೊತೆ ಚರ್ಚೆ ಮಾಡಿ ಮುಂದಿನ ಹೋರಾಟ ಹೇಗಿರಬೇಕು ಅನ್ನೋ ತೀರ್ಮಾನ ಮಾಡೋಣ. ಮುಂದಿನ ಹೋರಾಟದ ದಾರಿ ಹುಡುಕುವ ಕೆಲಸ ಮಾಡೋಣ ಎಂದು ಕರೆ ನೀಡಿದ್ದಾರೆ.

