– 17,000 ಕೋಟಿ ರೂ. ಹೂಡಿಕೆಯೊಂದಿಗೆ ಚಿದಂಬರನಾರ್ ಬಂದರು ಅಭಿವೃದ್ಧಿ
– ಭಾರತ ವಿಶ್ವದ 2ನೇ ಅತಿದೊಡ್ಡ ಮೊಬೈಲ್ ತಯಾರಕ ದೇಶವಾಗಿದೆ
ಚೆನ್ನೈ: ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (C. Joseph Vijay) ಅವರ ಸಹಯೋಗದೊಂದಿಗೆ ಕೇಂದ್ರ ಸರ್ಕಾರ ತಮಿಳುನಾಡಿನ ಅಭಿವೃದ್ಧಿಯನ್ನ ಮುಂದಕ್ಕೆ ಕೊಂಡೊಯ್ಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿದ್ದಾರೆ.
ಚೆನ್ನೈನಲ್ಲಿ (Chennai) ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಮುಖ್ಯಮಂತ್ರಿಯಾಗಿ ನಾನು ರಾಜ್ಯಗಳ ನಿರೀಕ್ಷೆಗಳನ್ನ ಅರ್ಥಮಾಡಿಕೊಂಡಿದ್ದೆ. ಹಾಗಾಗಿ ಪ್ರಧಾನಿಯಾದ ಬಳಿಕ ಆ ಆಶಯಗಳನ್ನ ಈಡೇರಿಸಲು ಮಾತ್ರವಲ್ಲದೇ, ಪ್ರತಿಯೊಂದು ರಾಜ್ಯವೂ ತನ್ನದೇ ಆದ ಅಭಿವೃದ್ಧಿಯ ಗುರಿಗಳನ್ನ ಸಾಧಿಸಲು ಅಗತ್ಯವಿರುವ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದ್ದಾರೆ.
Golden Jubilee celebrations of Jaigopal Garodia Hindu Vidyalaya in Chennai… The energy of our youth inspires great faith in India’s future. https://t.co/FoyiqVrShY
— Narendra Modi (@narendramodi) October 11, 2026
ತಮಿಳುನಾಡು ಕೊಡುಗೆ ಶ್ಲಾಘಿಸಿದ ಮೋದಿ
ಮುಂದುವರಿದು… ತಮಿಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ದೇಶದ ಉತ್ಪಾದನಾ ಕ್ಷೇತ್ರದ ಬೆಳವಣಿಗೆಗೆ ರಾಜ್ಯ ನೀಡುತ್ತಿರುವ ಕೊಡುಗೆಯನ್ನ ಶ್ಲಾಘಿಸಿದರು. 2014ರಿಂದ ನಮ್ಮ ಎಲೆಕ್ಟ್ರಾನಿಕ್ಸ್ ರಫ್ತು 11 ಪಟ್ಟು ಹೆಚ್ಚಾಗಿದೆ. ಇಂದು ನಾವು ವಿಶ್ವದ 2ನೇ ಅತಿದೊಡ್ಡ ಮೊಬೈಲ್ ತಯಾರಕ ದೇಶವಾಗಿದ್ದೇವೆ. ನಮ್ಮ ರಕ್ಷಣಾ ರಫ್ತು 50 ಪಟ್ಟು ಹೆಚ್ಚಾಗಿದೆ. ನಮ್ಮ ಎಂಜಿನಿಯರಿಂಗ್ ರಫ್ತು ಕೂಡ ಹೊಸ ದಾಖಲೆ ನಿರ್ಮಿಸಿದೆ. ಉತ್ಪಾದನಾ ಕ್ಷೇತ್ರದಲ್ಲಿನ ಈ ಬೆಳವಣಿಗೆಯಿಂದ ದೇಶದ ಯುವಕರಿಗೆ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ವಿವರಿಸಿದ್ದಾರೆ.

ಇನ್ನೂ ತಮಿಳುನಾಡಿನ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, ತೂತ್ತುಕುಡಿಯ ಚಿದಂಬರನಾರ್ ಬಂದರನ್ನ ಸುಮಾರು 17,000 ಕೋಟಿ ರೂ. ಹೂಡಿಕೆಯೊಂದಿಗೆ ವಿಶ್ವದರ್ಜೆಯ ಮೆಗಾ ಕಂಟೇನರ್ ಮತ್ತು ಹಸಿರು ಇಂಧನ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಯೋಜನೆ ಪೂರ್ಣಗೊಂಡ ಬಳಿಕ, ವಿಶ್ವದ ಅತಿ ದೊಡ್ಡ ಗಾತ್ರದ ಕಂಟೇನರ್ ಹಡಗುಗಳಿಗೆ ಬಂದರು ಅವಕಾಶ ಕಲ್ಪಿಸಲಿದೆ. ಇದರಿಂದ ತಮಿಳುನಾಡನ್ನ ಕೈಗಾರಿಕೆ ಮತ್ತು ಸಾರಿಗೆ ಕ್ಷೇತ್ರದ ಜಾಗತಿಕ ಕೇಂದ್ರವಾಗಿ ಪರಿವರ್ತಿಸಲು ಸಹಾಯವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಪೂರಣಮಲ್ಲಿ-ವಡಪಳನಿ ಮೆಟ್ರೋ ಮಾರ್ಗ ಉದ್ಘಾಟಿಸಿದ ಪ್ರಧಾನಿ
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಚೆನ್ನೈ ಮೆಟ್ರೋ ರೈಲು ಯೋಜನೆಯ 2ನೇ ಹಂತದ ಪೂರಣಮಲ್ಲಿ-ವಡಪಳನಿ ಮಾರ್ಗವನ್ನ ಉದ್ಘಾಟಿಸಿದರು. ಬಳಿಕ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸಿದರು.

