ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ 416ನೇ ನಾಡಹಬ್ಬ ದಸರಾ(Mysuru Dasara) ಮಹೋತ್ಸವಕ್ಕೆ ಇಂದು ಚಾಲನೆ ಸಿಗಲಿದೆ.
ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 11:50 ರಿಂದ 12:13 ರ ಶುಭ ಧನುರ್ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar), ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಕೇಂದ್ರ ಮತ್ತು ರಾಜ್ಯದ ಹಲವು ಮುಖಂಡರು ಹಾಗೂ ನೂರಾರು ಮಠಾಧೀಶರು ಭಾಗಿಯಾಗಲಿದ್ದಾರೆ.
ದಸರಾ ಉದ್ಘಾಟನೆ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕರಿಗೆ ಚಾಮುಂಡಿ ಬೆಟ್ಟಕ್ಕೆ ನಿರ್ಬಂಧ ಹೇರಲಾಗಿದೆ. ಮಧ್ಯಾಹ್ನದ ಬಳಿಕ ಸಾರ್ವಜನಿಕರಿಗೆ ಎಂದಿನಂತೆ ದರ್ಶನಕ್ಕೆ ಅವಕಾಶ ಸಿಗಲಿದೆ.
ಮೈಸೂರು ಅರಮನೆಯಲ್ಲಿ(Mysuru Palace) ಮುಂಜಾನೆಯಿಂದಲೇ ಸಾಂಪ್ರದಾಯಿಕ ಧಾರ್ಮಿಕ ಕೈಂಕರ್ಯಗಳು ಆರಂಭಗೊಂಡವು. ಬೆಳಿಗ್ಗೆ 6 ರಿಂದ 7:12 ರ ನಡುವೆ ರತ್ನಾಖಚಿತ ಸಿಂಹಾಸನಕ್ಕೆ ಸಿಂಹ ಮುಖ ಜೋಡಣೆ ನೆರವೇರಿಸಲಾಯಿತು. ಬೆಳಿಗ್ಗೆ 8:35 ರಿಂದ 9:05 ರ ಶುಭ ವೇಳೆಯಲ್ಲಿ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಲಾಗುತ್ತದೆ.ಇದನ್ನು ಓದಿ: ಮೈಸೂರು ದಸರಾ 2026: ಚಾಮುಂಡಿ ಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ನಿಷೇಧಾಜ್ಞೆ ಜಾರಿ
ಮೈಸೂರು ದಸರಾ.. ಭುವನ ಸುಂದರಾ..
ನಾಲ್ಕು ಶತಮಾನಗಳ ಭವ್ಯ ಇತಿಹಾಸವಿರುವ ನಾಡಹಬ್ಬ ಮೈಸೂರು ದಸರಾ ವೈಭವವನ್ನು ಕಣ್ತುಂಬಿಕೊಳ್ಳುವ ಸಮಯ ಮತ್ತೆ ಬಂದಿದೆ. ಲಕ್ಷಾಂತರ ದೀಪಗಳಿಂದ ಮದುವಣಗಿತ್ತಿಯಂತೆ ಝಗಮಗಿಸುವ ರಾಜಬೀದಿಗಳು, ಹೆಜ್ಜೆಗೊಂದು ರಂಗೇರಿಸುವ ಜಾನಪದ ಸೊಗಡು ಮತ್ತು 750 ಕೆ.ಜಿ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಸಾಗುವ ತಾಯಿ ಚಾಮುಂಡೇಶ್ವರಿಯ ಜಂಬೂಸವಾರಿ ಜನ್ಮದಲ್ಲೊಮ್ಮೆ ನೋಡಲೇಬೇಕಾದ ಅದ್ಭುತ. ಕೊಪ್ಪಳ ಗವಿಮಠದ ಪರಮ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳ ದಿವ್ಯ ಹಸ್ತದಿಂದ ಶುಭಾರಂಭಗೊಳ್ಳಲಿರುವ ಈ ಬಾರಿಯ ದಸರಾ, ಭಕ್ತಿ ಮತ್ತು ಕಲೆಯ ದಿವ್ಯ ಸಮ್ಮಿಲನವಾಗಿದೆ.
ಈ ಸಾಂಸ್ಕೃತಿಕ ಮಹೋತ್ಸವಕ್ಕೆ ತಮಗೆಲ್ಲರಿಗೂ ಆದರದ ಸುಸ್ವಾಗತ. ಕರುನಾಡಿನ ಆತಿಥ್ಯ ಸವಿಯಲು ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ!
#ನಾಡಹಬ್ಬ #Mysuru_Dasara2026
— DK Shivakumar (@DKShivakumar) October 11, 2026
ರಾಜಪೋಷಾಕಿನಲ್ಲಿ ಯದುವೀರ್ ಒಡೆಯರ್ ಬೆಳಿಗ್ಗೆ 11:50 ರಿಂದ 12:13 ರ ಶುಭ ಲಗ್ನದಲ್ಲಿ ಸಿಂಹಾಸನಾರೋಹಣ ಮಾಡಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಬಳಿಕ ನಾಡಿನ ಪ್ರಮುಖ ದೇವಾಲಯಗಳಿಂದ ಆಗಮಿಸಿದ ತೀರ್ಥ-ಪ್ರಸಾದಗಳನ್ನು ಸ್ವೀಕರಿಸಿದರು. ಮಧ್ಯಾಹ್ನ 1:40 ರಿಂದ 2:05 ರವರೆಗೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ಚಾಮುಂಡೇಶ್ವರಿ ತೊಟ್ಟಿಯಿಂದ ಕನಕ ತೊಟ್ಟಿಗೆ ತಂದು ನವರಾತ್ರಿ ಪೂಜೆ ನೆರವೇರಿಸಲಾಗುತ್ತದೆ.
ದಿನವಿಡಿ ಸಿಎಂ ಕಾರ್ಯಕ್ರಮ
ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಮೈಸೂರಿನಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ
ಬೆಳಿಗ್ಗೆ 10:00 – ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮನ.
ಬೆಳಿಗ್ಗೆ11:50 – ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಸಮಾರಂಭ.
ಮಧ್ಯಾಹ್ನ 12:30: ಕುಪ್ಪಣ್ಣ ಪಾರ್ಕ್ನಲ್ಲಿ ಆಕರ್ಷಕ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ.
ಮಧ್ಯಾಹ್ನ 3:30: ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನೆ.
ಸಂಜೆ 4:30: ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ‘ದಸರಾ ಸಿಎಂ ಕಪ್’ ಕ್ರೀಡಾಕೂಟಕ್ಕೆ ಚಾಲನೆ.
ಸಂಜೆ 6:00: ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ ಪ್ರದಾನ.
ರಾತ್ರಿ 7:30: ದೊಡ್ಡಕೆರೆ ಮೈದಾನದಲ್ಲಿ ದಸರಾ ವಸ್ತುಪ್ರದರ್ಶನ ಉದ್ಘಾಟನೆ.
ರಾತ್ರಿ 8:30: ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಚೆನ್ನೈಗೆ ಪ್ರಯಾಣ.

