ಕೋಲ್ಕತ್ತಾ: ನಂದಿಗ್ರಾಮ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ (Nandigram Bypoll Result) ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಗೆಲುವಾಗಿದೆ. ಕಮಲ ಅಭ್ಯರ್ಥಿ ಹಸಿರಾಣಿ ರಾಥ್ (Hasi Rani Rath) ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ವಿರುದ್ಧ 1,22,753 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ರಾಜಕೀಯವಾಗಿ ಮಹತ್ವ ಪಡೆದಿರುವ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರಂಭದಿಂದಲೂ ಭಾರೀ ಮುನ್ನಡೆ ಕಾಯ್ದುಕೊಂಡಿದ್ದರು. ಈ ಗೆಲುವಿನ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.
ನಂದಿಗ್ರಾಮ ಮತ್ತು ರೆಜಿನಗರ ಉಪಚುನಾವಣೆ ಫಲಿತಾಂಶಗಳು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರದ ಮೇಲಿನ ಜನರ ವಿಶ್ವಾಸವನ್ನ ಮತ್ತಷ್ಟು ಹೆಚ್ಚಿಸಿದೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಂಗಾಳ ಬಿಜೆಪಿ ಘಟಕ, ಬಿಜೆಪಿ ನೇತೃತ್ವದ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಜನರು ನೀಡಿದ ಬೆಂಬಲವೇ ಈ ಫಲಿತಾಂಶಕ್ಕೆ ಕಾರಣ ಎಂದು ಹೇಳಿಕೊಂಡಿದೆ.

1.22 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು
17 ಸುತ್ತಿನ ಮತ ಎಣಿಕೆ ಪೂರ್ಣಗೊಂಡ ಬಳಿಕ ಬಿಜೆಪಿ ಅಭ್ಯರ್ಥಿ ಹಸಿರಾಣಿ ರಾಥ್ ಅವರು 1,22,753 ಮತಗಳ ಭರ್ಜರಿ ಮುನ್ನಡೆ ಸಾಧಿಸಿದ್ದರು. ರಾಥ್ ಅವರು ಒಟ್ಟು 1,64,427 ಮತಗಳನ್ನ ಪಡೆದುಕೊಂಡಿದ್ದಾರೆ. ʻಕೈʼ ಅಭ್ಯರ್ಥಿ ಮಿಲನ್ ಪ್ರಧಾನ್ 41,674 ಮತಗಳನ್ನ ಪಡೆದು ಹೀನಾಯ ಸೋಲು ಕಂಡಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿ-ಅಂಶ ಬಹಿರಂಗಪಡಿಸಿದೆ.
ಭಾರತೀಯ ಚುನಾವಣಾ ಆಯೋಗ (ECI) ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ರಾಥ್ 1,64,427 ಮತಗಳನ್ನು ಪಡೆದರೆ, ಪ್ರಧಾನ್ 41,674 ಮತಗಳನ್ನು ಗಳಿಸಿದರು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) ನಾಯಕ ಶಾಂತಿ ಗೋಪಾಲ್ ಗಿರಿ 5,779 ಮತಗಳನ್ನ ಮತ್ತು ಆಲ್ ಇಂಡಿಯಾ ಸೆಕ್ಯುಲರ್ ಫ್ರಂಟ್ (AISF) ನಾಯಕ ಅಲಿ ಮೊಹಮ್ಮದ್ ಸಬ್ಸೆ ಮಿರಾಜ್ ಖಾನ್ 1,607 ಮತಗಳನ್ನು ಪಡೆದರು.

