ಬೆಳಗಾವಿ: ಹಿರಿಯ ಬಾಲಿವುಡ್ ನಟ ನಾನಾ ಪಾಟೇಕರ್(Nana Patekar) ಅವರ ನಿಧನದಿಂದಾಗಿ ಕುಂದಾನಗರಿ ಬೆಳಗಾವಿಯಲ್ಲೂ(Belagavi) ಶೋಕದ ವಾತಾವರಣ ನಿರ್ಮಾಣವಾಗಿದೆ. ಕೇವಲ ನಟನಾಗಿ ಮಾತ್ರವಲ್ಲದೆ, ಬೆಳಗಾವಿ ನಗರ ಹಾಗೂ ಇಲ್ಲಿನ ಜನರೊಂದಿಗೆ ನಾನಾ ಪಾಟೇಕರ್ ಅವರು ದಶಕಗಳ ಕಾಲ ಅವಿನಾಭಾವ ಮತ್ತು ಆತ್ಮೀಯ ಸಂಬಂಧವನ್ನು ಹೊಂದಿದ್ದರು.
ಅವರ ಹಠಾತ್ ಅಗಲಿಕೆಗೆ ಬೆಳಗಾವಿಯ ಮಾಜಿ ಮೇಯರ್ ವಿಜಯ್ ಮೋರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಹಳೆಯ ನೆನಪುಗಳನ್ನು ಪಬ್ಲಿಕ್ ಟಿವಿ ಜೊತೆ ಮೆಲುಕು ಹಾಕಿದ್ದಾರೆ.
1990-91ರ ಅವಧಿಯಲ್ಲಿ ನಾನಾ ಪಾಟೇಕರ್ ಅವರ ಚೊಚ್ಚಲ ನಿರ್ದೇಶನದ ಸೂಪರ್ ಹಿಟ್ ಹಿಂದಿ ಚಿತ್ರ ಪ್ರಹಾರ್ (Prahaar)ಸಿನಿಮಾದ ಪ್ರಮುಖ ಚಿತ್ರೀಕರಣ ಬೆಳಗಾವಿಯ ಹಿಂಡಲಗಾ ಜೈಲು(Hindalga Jail)ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ನಡೆದಿತ್ತು. ಶೂಟಿಂಗ್ ವೇಳೆ ಅವರು ನಗರದ ಖ್ಯಾತ ‘ಗ್ರೀನ್ ಹೋಟೆಲ್’ನಲ್ಲಿ ಉಳಿದುಕೊಳ್ಳುತ್ತಿದ್ದರು. ಆ ಸಂದರ್ಭದಿಂದಲೇ ಅವರಿಗೆ ಬೆಳಗಾವಿ ಮತ್ತು ಇಲ್ಲಿನ ಜನರ ಮೇಲೆ ಅಪಾರ ಪ್ರೀತಿ, ಒಡನಾಟ ಬೆಳೆದಿತ್ತು.
ಬೆಳಗಾವಿಯ ಗಣಾಚಾರಿ ಗಲ್ಲಿಯಲ್ಲಿರುವ ಪಾವಸೆ ಕುಟುಂಬದೊಂದಿಗೆ ನಾನಾ ಪಾಟೇಕರ್ ಅವರಿಗೆ ಅತ್ಯಂತ ನಿಕಟ ಸ್ನೇಹವಿತ್ತು. ಅಷ್ಟೇ ಅಲ್ಲದೆ, ಮಾಜಿ ಮೇಯರ್ ವಿಜಯ್ ಮೋರೆ ಅವರೊಂದಿಗೆ ಸಹ ಆಪ್ತ ಒಡನಾಟವಿತ್ತು. ಬೆಳಗಾವಿಗೆ ಬಂದಾಗಲೆಲ್ಲಾ ಆಡಂಬರವಿಲ್ಲದೆ ಸ್ನೇಹಿತರ ಮನೆಗೆ ಭೇಟಿ ನೀಡಿ ಹೋಗುತ್ತಿದ್ದರು. “ನಾನು ಬಂದಾಗ ಯಾರಿಗೂ ಹೇಳಬೇಡ, ಪ್ರಚಾರ ಬೇಡ” ಎಂದು ಸರಳವಾಗಿ ಬಂದು ಹೋಗುತ್ತಿದ್ದ ಗುಣ ಅವರದ್ದಾಗಿತ್ತು ಎಂದು ವಿಜಯ್ ಮೋರೆ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡದ ‘ಯಕ್ಷ’ದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದ ನಾನಾ ಪಾಟೇಕರ್!
ಜೂನ್ 29, 2025 ರಂದು ಬೆಳಗಾವಿಯ ತಿಲಕವಾಡಿಯಲ್ಲಿರುವ ಅತ್ಯಾಧುನಿಕ ಸೆಂಟ್ರಾಕೇರ್ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯನ್ನು ನಾನಾ ಪಾಟೇಕರ್ ಅವರು ಸಾಂಸ್ಕೃತಿಕ ಮುಖಂಡ ಸಂಭಾಜಿ ಭಿಡೆ ಗುರೂಜಿ ಅವರೊಂದಿಗೆ ಸೇರಿ ಉದ್ಘಾಟಿಸಿದ್ದರು.

