ಬೆಂಗಳೂರು: ಕಂಠೀರವ ಸ್ಟುಡಿಯೋ ಜಂಕ್ಷನ್(Kanteerava Studio Junction) ಬಳಿ ಸಂಭವಿಸಿದ ಭೀಕರ ರಸ್ತೆ ಕುಸಿತದ ಕುರಿತು ಪಬ್ಲಿಕ್ ಟಿವಿ(PUBLiC TV) ಬಿತ್ತರಿಸಿದ ವಿಸ್ತೃತ ವರದಿಗೆ ಕೊನೆಗೂ ಎಚ್ಚೆತ್ತ ಜಿಬಿಎ(GBA) ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಕೇವಲ ಕಣ್ಣೊರೆಸುವ ತೇಪೆ ಕೆಲಸ ಮಾಡಿ ಕೈತೊಳೆದುಕೊಂಡಿದ್ದಾರೆ.
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ನಿನ್ನೆ ರಾತ್ರಿ ಸ್ಥಳಕ್ಕೆ ಭೇಟಿ ನೀಡಿದ ಜಿಬಿಎ ಇಂಜಿನಿಯರ್ಗಳು, ಕುಸಿದಿದ್ದ ಗುಂಡಿಗೆ ಶಾಶ್ವತವಾಗಿ ಡಾಂಬರೀಕರಣ ಮಾಡುವ ಬದಲು ಕೇವಲ ಮಣ್ಣು ಮತ್ತು ಕಟ್ಟಡದ ಡೆಬ್ರಿಸ್ (ಕಟ್ಟಡ ತ್ಯಾಜ್ಯ) ಸುರಿದು ಹೋಗಿದ್ದಾರೆ. ಇನ್ನೊಂದು ಬಾರಿ ಜೋರು ಮಳೆ ಬಂದರೆ ಈ ಮಣ್ಣು ಕೊಚ್ಚಿಹೋಗಿ ರಸ್ತೆ ಮತ್ತಷ್ಟು ಆಳವಾಗಿ ಕುಸಿಯುವುದು ಖಚಿತ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ – ತೊಗರಿ ಹೊಲದಲ್ಲಿ ಲ್ಯಾಂಡಿಂಗ್
ಆರ್.ಆರ್. ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕಂಠೀರವ ಸ್ಟುಡಿಯೋ ಜಂಕ್ಷನ್ನಿಂದ ಜಾಲಹಳ್ಳಿ ಕ್ರಾಸ್ವರೆಗಿನ ರಸ್ತೆ ಡಾಂಬರು ಕಂಡು ಹಲವು ವರ್ಷಗಳೇ ಕಳೆದಿವೆ. ರಸ್ತೆಯುದ್ದಕ್ಕೂ ಬೃಹತ್ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಪ್ರತಿದಿನ ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಇದೆ.
ಮಳೆ ಬಂದರಂತೂ ಈ ಮಾರ್ಗ ಸಂಪೂರ್ಣ ಕೆಸರುಮಯವಾಗಿ ವಾಹನ ಸವಾರರಿಗೆ ನರಕ ದರ್ಶನ ಮಾಡಿಸುತ್ತಿದೆ. ಯಾವುದೇ ನಿರ್ವಹಣೆಯಿಲ್ಲದೆ ಹಾಳಾಗಿರುವ ಈ ಪ್ರಮುಖ ರಸ್ತೆಗೆ ಕೇವಲ ತೇಪೆ ಹಚ್ಚುವ ಬದಲು ಗುಣಮಟ್ಟದ ಡಾಂಬರೀಕರಣ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

