ಚಳಿಗಾಲ ಆರಂಭವಾಗುತ್ತಿದ್ದಂತೆ ದೆಹಲಿಯಲ್ಲಿ ವಾಯುಮಾಲಿನ್ಯದ (Delhi Pollution) ಸಮಸ್ಯೆ ಮತ್ತೆ ತೀವ್ರಗೊಳ್ಳುವ ಆತಂಕ ಎದುರಾಗುತ್ತದೆ. ತಾಪಮಾನ ಕುಸಿತ, ಗಾಳಿಯ ವೇಗ ಕಡಿಮೆಯಾಗುವುದು, ವಾಹನಗಳ ಹೊಗೆ, ರಸ್ತೆ ಧೂಳು, ನಿರ್ಮಾಣ ಕಾಮಗಾರಿಗಳು, ಕೈಗಾರಿಕಾ ಮಾಲಿನ್ಯ ಮತ್ತು ಪಕ್ಕದ ರಾಜ್ಯಗಳಲ್ಲಿನ ಬೆಳೆ ತ್ಯಾಜ್ಯ ಸುಡುವಿಕೆ ಸೇರಿದಂತೆ ಹಲವು ಕಾರಣಗಳಿಂದ ದೆಹಲಿಯ ಗಾಳಿಯ ಗುಣಮಟ್ಟ ಹದಗೆಡುತ್ತದೆ. ಈ ಹಿನ್ನೆಲೆಯಲ್ಲಿ 2026-27ರ ಚಳಿಗಾಲಕ್ಕಾಗಿ (Winter Season) ದೆಹಲಿ ಸರ್ಕಾರ ಹಲವು ಮುಂಚಿತ ಕ್ರಮಗಳನ್ನು ಒಳಗೊಂಡ ವಿಂಟರ್ ಆಕ್ಷನ್ ಪ್ಲಾನ್ (Delhi Winter Action Plan) ಜಾರಿಗೆ ತಂದಿದೆ.
ಹಾಗಿದ್ರೆ ಏನಿದು ಚಳಿಗಾಲದ ಮಾಲಿನ್ಯ ತಡೆ? ಚಳಿಗಾಲದಲ್ಲೇ ಮಾಲಿನ್ಯ ಏಕೆ ಹೆಚ್ಚಾಗುತ್ತದೆ? ದೆಹಲಿ ಇದಕ್ಕೆ ಹೇಗೆ ಸಜ್ಜುಗೊಂಡಿದೆ? ನಿಯಮಗಳೇನು? ಈ ಬಾರಿಯ ಬದಲಾವಣೆಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಏನಿದು ವಿಂಟರ್ ಆಕ್ಷನ್ ಪ್ಲಾನ್?
ಪ್ರತಿ ವರ್ಷ ಚಳಿಗಾಲದಲ್ಲಿ ಮಾಲಿನ್ಯ ಹೆಚ್ಚಾದ ಬಳಿಕ ತುರ್ತು ನಿರ್ಬಂಧಗಳನ್ನು ಹೇರುವ ಬದಲು, ಮೊದಲೇ ಕೆಲವು ಕ್ರಮಗಳನ್ನು ಜಾರಿಗೆ ತರುವುದು ಈ ಯೋಜನೆಯ ಉದ್ದೇಶ. ದೆಹಲಿ ಸರ್ಕಾರದ ಶಾಶ್ವತ ಚಳಿಗಾಲದ ಮಾಲಿನ್ಯ ನಿರ್ವಹಣಾ ಚೌಕಟ್ಟು ಪ್ರತಿ ವರ್ಷ ನವೆಂಬರ್ 1ರಿಂದ ಫೆಬ್ರವರಿ 28ರವರೆಗೆ ಅನ್ವಯವಾಗಲಿದೆ. ಇದರಲ್ಲಿ ವಾಹನಗಳು, ನಿರ್ಮಾಣ, ರಸ್ತೆ ಧೂಳು, ಕಚೇರಿ ಸಂಚಾರ ಮತ್ತು ಪಾರ್ಕಿಂಗ್ ಸೇರಿದಂತೆ ಹಲವು ಕ್ಷೇತ್ರಗಳನ್ನು ಗುರಿಯಾಗಿಸಲಾಗಿದೆ.
ಚಳಿಗಾಲದಲ್ಲೇ ಮಾಲಿನ್ಯ ಏಕೆ ಹೆಚ್ಚಾಗುತ್ತದೆ?
ಚಳಿಗಾಲದಲ್ಲಿ ನೆಲದ ಸಮೀಪದ ಗಾಳಿಯ ಚಲನೆ ನಿಧಾನವಾಗುವುದರಿಂದ ವಾಹನಗಳು ಮತ್ತು ಕೈಗಾರಿಕೆಗಳಿಂದ ಹೊರಬರುವ ಮಾಲಿನ್ಯಕಾರಕ ಕಣಗಳು ಮೇಲಕ್ಕೆ ಚದುರಲು ಕಷ್ಟವಾಗುತ್ತದೆ. ಇದರ ಜೊತೆಗೆ ಮಂಜು, ಕಡಿಮೆ ಗಾಳಿಯ ವೇಗ ಮತ್ತು ವಿವಿಧ ಮೂಲಗಳಿಂದ ಹೊರಬರುವ ಹೊಗೆ ಸೇರಿಕೊಂಡು ದೆಹಲಿಯಲ್ಲಿ ಮಂಜಿನ ಪರಿಸ್ಥಿತಿ ಉಂಟಾಗಬಹುದು.
ಇದಕ್ಕೆ ಸ್ಥಳೀಯ ಮಾಲಿನ್ಯ ಮಾತ್ರ ಕಾರಣವಲ್ಲ. ದೆಹಲಿ-ಎನ್‌ಸಿಆರ್ ಪ್ರದೇಶ ಒಂದೇ ವಾಯುಪ್ರದೇಶದಂತೆ ಕಾರ್ಯನಿರ್ವಹಿಸುವುದರಿಂದ ಸುತ್ತಮುತ್ತಲಿನ ಪ್ರದೇಶಗಳ ವಾಹನಗಳು, ಕೈಗಾರಿಕೆಗಳು ಮತ್ತು ಇತರ ಮೂಲಗಳ ಮಾಲಿನ್ಯವೂ ದೆಹಲಿಯ ಗಾಳಿಯ ಮೇಲೆ ಪರಿಣಾಮ ಬೀರುತ್ತದೆ.
ವಾಹನಗಳ ಮೇಲೆ ಕಠಿಣ ನಿಯಮ:
ವಿಂಟರ್ ಆಕ್ಷನ್ ಪ್ಲಾನ್‌ನಲ್ಲಿ ವಾಹನ ಮಾಲಿನ್ಯಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. 2026ರ ನವೆಂಬರ್ 1ರಿಂದ ದೆಹಲಿಯ ಹೊರಗೆ ನೋಂದಾಯಿತ ಮತ್ತು BS-VIಕ್ಕಿಂತ ಕಡಿಮೆ ಹೊರಸೂಸುವಿಕೆ ಮಾನದಂಡ ಹೊಂದಿರುವ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸುವ ಕ್ರಮವಿದೆ. CNG ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಇದರ ಉದ್ದೇಶ ಹೆಚ್ಚಿನ ಮಾಲಿನ್ಯ ಉಂಟುಮಾಡುವ ಹಳೆಯ ವಾಹನಗಳ ಸಂಚಾರವನ್ನು ಕಡಿಮೆ ಮಾಡುವುದು. ವಿಶೇಷವಾಗಿ ಚಳಿಗಾಲದಲ್ಲಿ ದೆಹಲಿಗೆ ಹೊರರಾಜ್ಯಗಳಿಂದ ಬರುವ ವಾಹನಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಈ ಕ್ರಮವನ್ನು ಮುಂಚಿತವಾಗಿ ಜಾರಿಗೆ ತರಲಾಗುತ್ತಿದೆ.
‘No PUCC, No Fuel’ ಎಂದರೇನು?
ವಾಹನ ಮಾಲೀಕರಿಗೆ ಪ್ರಮುಖವಾಗಿರುವ ಮತ್ತೊಂದು ಕ್ರಮ ‘No PUCC, No Fuel’. ಅಂದರೆ ಮಾನ್ಯವಾದ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಇಲ್ಲದ ವಾಹನಗಳಿಗೆ ಇಂಧನ ನೀಡದಿರುವ ವ್ಯವಸ್ಥೆ. ಇಂಧನ ಕೇಂದ್ರಗಳಲ್ಲಿ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಪರಿಶೀಲಿಸಿ PUCC ಸ್ಥಿತಿಯನ್ನು ಪತ್ತೆಹಚ್ಚಲು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಈ ನಿಯಮದ ಉದ್ದೇಶ ಮಾಲಿನ್ಯ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದು ಮತ್ತು ವಾಹನ ಮಾಲೀಕರನ್ನು ಪ್ರಮಾಣಪತ್ರ ನವೀಕರಿಸಲು ಪ್ರೇರೇಪಿಸುವುದಾಗಿದೆ.
ಪಾರ್ಕಿಂಗ್ ಶುಲ್ಕ ಏಕೆ ಹೆಚ್ಚಿಸಲಾಗುತ್ತಿದೆ?
ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಚಳಿಗಾಲದಲ್ಲಿ ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸುವ ಕ್ರಮವೂ ಚಳಿಗಾಲದ ಪ್ರೋಟೋಕಾಲ್‌ನಲ್ಲಿದೆ. ಕೆಲವು ಸಂದರ್ಭಗಳಲ್ಲಿ ಶುಲ್ಕವನ್ನು ದ್ವಿಗುಣಗೊಳಿಸುವ ವ್ಯವಸ್ಥೆಯನ್ನು ಸರ್ಕಾರ ಘೋಷಿಸಿದೆ. ಇದರ ಹಿಂದೆ ಇರುವ ಉದ್ದೇಶ ಸರಳವಾಗಿದೆ. ಖಾಸಗಿ ವಾಹನ ಬಳಕೆ ಕಡಿಮೆಯಾದರೆ ರಸ್ತೆಗಳ ಮೇಲಿನ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಅದರಿಂದ ವಾಹನಗಳಿಂದ ಹೊರಬರುವ ಹೊಗೆಯ ಪ್ರಮಾಣವನ್ನು ನಿಯಂತ್ರಿಸಲು ಸಾಧ್ಯವಾಗಬಹುದು.
ಕಚೇರಿ ಸಮಯದಲ್ಲೂ ಬದಲಾವಣೆ;
ಚಳಿಗಾಲದ ಅವಧಿಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸರ್ಕಾರಿ ಕಚೇರಿಗಳಲ್ಲಿ ವಿಭಿನ್ನ ಸಮಯದಲ್ಲಿ ಕೆಲಸ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜಿಸಲಾಗಿದೆ. ಇದರ ಜೊತೆಗೆ ಅಗತ್ಯವಿರುವ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳಲ್ಲಿ 50% ಸಿಬ್ಬಂದಿಗೆ ವರ್ಕ್ ಫ್ರಮ್ ಹೋಂ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಇದರಿಂದ ಕಚೇರಿ ಸಮಯದ ಪೀಕ್ ಅವರ್ ಸಂಚಾರವನ್ನು ಕಡಿಮೆ ಮಾಡುವ ಉದ್ದೇಶವಿದೆ.
ನಿರ್ಮಾಣ ಕಾಮಗಾರಿಗಳಿಗೆ ಬ್ರೇಕ್:
ನಿರ್ಮಾಣ ಮತ್ತು ಕಟ್ಟಡ ಧ್ವಂಸ ಕಾಮಗಾರಿಗಳಿಂದ ದೊಡ್ಡ ಪ್ರಮಾಣದಲ್ಲಿ ಧೂಳು ಉತ್ಪತ್ತಿಯಾಗುತ್ತದೆ. ಹೀಗಾಗಿ ಇಂತಹ ಚಟುವಟಿಕೆಗಳ ಮೇಲೆ ಚಳಿಗಾಲದಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.
ನವೆಂಬರ್ 1ರಿಂದ 2027ರ ಜನವರಿ 31ರವರೆಗೆ ಧೂಳು ಉಂಟುಮಾಡುವ ಧ್ವಂಸ ಚಟುವಟಿಕೆಗಳು ಮತ್ತು ಹೊರಾಂಗಣ ಸಿವಿಲ್ ನಿರ್ಮಾಣ ಚಟುವಟಿಕೆಗಳ ಮೇಲೆ ಸಂಪೂರ್ಣ ನಿರ್ಬಂಧ ಇರಲಿದೆ. ಇದರ ಜೊತೆಗೆ ಡಿಸೆಂಬರ್ 10ರಿಂದ ಜನವರಿ 20ರವರೆಗೆ ನಿರ್ಮಾಣ ಮತ್ತು ಧ್ವಂಸ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಷೇಧ ಜಾರಿಯಾಗಲಿದೆ.
ನಿರ್ಮಾಣ ಸ್ಥಳಗಳ ಮೇಲೆ ಹೇಗೆ ನಿಗಾ?
ನಿರ್ಮಾಣ ಸ್ಥಳಗಳಲ್ಲಿ ಧೂಳು ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ದೊಡ್ಡ ನಿರ್ಮಾಣ ಸ್ಥಳಗಳಲ್ಲಿ ಧೂಳು ನಿಯಂತ್ರಣಕ್ಕೆ ಅಗತ್ಯ ವ್ಯವಸ್ಥೆಗಳನ್ನು ಅಳವಡಿಸುವುದು ಮತ್ತು ಮೇಲ್ವಿಚಾರಣೆಯನ್ನು ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. 700ಕ್ಕೂ ಹೆಚ್ಚು ನಿರ್ಮಾಣ ಸ್ಥಳಗಳನ್ನು AI ಮತ್ತು CCTV ಆಧಾರಿತ ಮೇಲ್ವಿಚಾರಣೆಗೆ ಒಳಪಡಿಸುವ ವ್ಯವಸ್ಥೆಯನ್ನೂ ದೆಹಲಿ ಸರ್ಕಾರ ಆರಂಭಿಸಿದೆ.
ರಸ್ತೆ ಧೂಳಿಗೂ ಕಡಿವಾಣ:
ವಾಹನಗಳ ಹೊಗೆ ಮಾತ್ರವಲ್ಲದೆ ರಸ್ತೆಗಳಲ್ಲಿನ ಧೂಳೂ ದೆಹಲಿಯ ವಾಯುಮಾಲಿನ್ಯದ ಪ್ರಮುಖ ಮೂಲವಾಗಿದೆ. ಹೀಗಾಗಿ ರಸ್ತೆಗಳನ್ನು ಯಾಂತ್ರಿಕವಾಗಿ ಸ್ವಚ್ಛಗೊಳಿಸುವುದು, ನೀರು ಸಿಂಪಡಿಸುವುದು ಮತ್ತು ಧೂಳು ಸಂಗ್ರಹವಾಗುವ ಪ್ರದೇಶಗಳನ್ನು ಗುರುತಿಸಿ ಸ್ವಚ್ಛಗೊಳಿಸುವ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ವಿಶೇಷವಾಗಿ ಮಾಲಿನ್ಯ ಹಾಟ್‌ಸ್ಪಾಟ್‌ಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ ಮತ್ತು ನಿರ್ಮಾಣ ಧೂಳಿನ ಮೂಲಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. PWD 47 ಪ್ರಮುಖ ಮಾಲಿನ್ಯ ಹಾಟ್‌ಸ್ಪಾಟ್‌ಗಳ ಸುತ್ತ 3 ಕಿ.ಮೀ ವ್ಯಾಪ್ತಿಯಲ್ಲಿರುವ ಧೂಳಿನ ಮೂಲಗಳ ಮೇಲೆ ಗಮನಹರಿಸುತ್ತಿದೆ.
37 ಹಾಟ್‌ಸ್ಪಾಟ್‌ಗಳ ಮೇಲೆ ವಿಶೇಷ ನಿಗಾ:
ದೆಹಲಿಯಲ್ಲಿ ಮಾಲಿನ್ಯ ಹೆಚ್ಚಿರುವ 37 ಪ್ರಮುಖ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಅಲ್ಲಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪ್ರದೇಶಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ, ಜನಜಾಗೃತಿ ಮತ್ತು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಹೆಚ್ಚಿಸಲಾಗುತ್ತಿದೆ. ರಸ್ತೆ ಧೂಳು, ಕಸ ಸುಡುವಿಕೆ, ನಿರ್ಮಾಣ ಚಟುವಟಿಕೆ, ಸಂಚಾರ ದಟ್ಟಣೆ ಸೇರಿದಂತೆ ಸ್ಥಳೀಯ ಮಾಲಿನ್ಯದ ಮೂಲಗಳನ್ನು ಗುರುತಿಸಿ ಅವುಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವ ಉದ್ದೇಶ ಹೊಂದಲಾಗಿದೆ.
ಕಸ ಸುಡುವುದಕ್ಕೂ ಕಡಿವಾಣ:
ರಸ್ತೆ ಬದಿ, ಖಾಲಿ ಜಾಗ ಅಥವಾ ಇತರ ಪ್ರದೇಶಗಳಲ್ಲಿ ಕಸ ಸುಡುವುದರಿಂದ ಹೊಗೆ ಮತ್ತು ಸೂಕ್ಷ್ಮ ಕಣಗಳು ವಾತಾವರಣಕ್ಕೆ ಸೇರುತ್ತವೆ. ಹೀಗಾಗಿ ತೆರೆದ ಸ್ಥಳದಲ್ಲಿ ಸುಡುವುದು (Open Burning) ವಿರುದ್ಧ ವಿಶೇಷ ನಿಗಾ ವಹಿಸಲಾಗುತ್ತಿದೆ. GRAPನಲ್ಲಿಯೂ ಘನ ತ್ಯಾಜ್ಯ ಮತ್ತು ನಿರ್ಮಾಣ ತ್ಯಾಜ್ಯವನ್ನು ನಿಯಮಿತವಾಗಿ ತೆರವುಗೊಳಿಸುವುದು ಹಾಗೂ ಕಸ ಸುಡುವುದನ್ನು ತಡೆಯುವುದು ಪ್ರಮುಖ ಕ್ರಮಗಳಾಗಿವೆ.
ಸಣ್ಣ ರಸ್ತೆಗಳಿಗೆ ವಿಶೇಷ ಸ್ವಚ್ಛತಾ ಯಂತ್ರಗಳು:
ಕಿರಿದಾದ ರಸ್ತೆಗಳಲ್ಲೂ ಧೂಳು ನಿಯಂತ್ರಿಸಲು ಸಣ್ಣ ಗಾತ್ರದ ಎಲೆಕ್ಟ್ರಿಕ್ ಅಥವಾ ಇತರ ಪರಿಸರ ಸ್ನೇಹಿ ಸ್ವಚ್ಛತಾ ಯಂತ್ರಗಳನ್ನು ಬಳಸುವ ಯೋಜನೆಯಿದೆ. 10 ಮೀಟರ್‌ಗಿಂತ ಕಡಿಮೆ ಅಗಲವಿರುವ ರಸ್ತೆಗಳಲ್ಲಿ ಇವುಗಳನ್ನು ಬಳಸುವ ಮೂಲಕ ಧೂಳಿನ ನಿಯಂತ್ರಣಕ್ಕೆ ಒತ್ತು ನೀಡಲಾಗುತ್ತಿದೆ. ಇದರಿಂದ ದೊಡ್ಡ ಯಂತ್ರಗಳು ಸುಲಭವಾಗಿ ಸಂಚರಿಸಲಾಗದ ಕಿರಿದಾದ ರಸ್ತೆ, ವಸತಿ ಪ್ರದೇಶ ಮತ್ತು ಒಳಗಿನ ರಸ್ತೆಗಳನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುವ ಗುರಿ ಹೊಂದಲಾಗಿದೆ.
ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಒತ್ತು:
ಖಾಸಗಿ ವಾಹನಗಳ ಬಳಕೆ ಕಡಿಮೆಯಾಗಲು ಮೆಟ್ರೋ ಮತ್ತು ಬಸ್ ಸೇವೆಗಳನ್ನು ಹೆಚ್ಚು ಬಳಸುವಂತೆ ಜನರನ್ನು ಉತ್ತೇಜಿಸಲಾಗುತ್ತಿದೆ. ಕೊನೆಯ ಹಂತದ ಸಂಪರ್ಕ ಸುಧಾರಿಸಲು Delhi Metro Sarthi App ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಯೋಜನೆಯೂ ಇದೆ.
ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾದರೆ ರಸ್ತೆ ಮೇಲಿನ ಖಾಸಗಿ ವಾಹನಗಳ ಸಂಖ್ಯೆ ಕಡಿಮೆಯಾಗಬಹುದು. ಇದರ ಪರಿಣಾಮವಾಗಿ ಸಂಚಾರ ದಟ್ಟಣೆ ಮತ್ತು ವಾಹನಗಳಿಂದ ಹೊರಬರುವ ಹೊಗೆಯನ್ನು ನಿಯಂತ್ರಿಸಲು ಸಾಧ್ಯವಾಗಬಹುದು.
ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ:
ದೀರ್ಘಕಾಲೀನವಾಗಿ ವಾಹನ ಮಾಲಿನ್ಯ ಕಡಿಮೆ ಮಾಡಲು ಇವಿ ಪಾಲಿಸಿ 2026 ಮತ್ತು ಪರಿವರ್ತನ್ ಸ್ಕೀಮ್‌ಗೆ ಉತ್ತೇಜನ ನೀಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳ ನೋಂದಣಿ ಹೆಚ್ಚಿಸುವುದು ಮತ್ತು ಜನರಲ್ಲಿ ಅವುಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದು ಇದರ ಭಾಗವಾಗಿದೆ. ಇದರ ಜೊತೆಗೆ ಹಳೆಯ ಮತ್ತು ಹೆಚ್ಚು ಮಾಲಿನ್ಯ ಉಂಟುಮಾಡುವ ವಾಹನಗಳನ್ನು ಹಂತಹಂತವಾಗಿ ರಸ್ತೆಗಳಿಂದ ತೆಗೆದುಹಾಕುವ ಪ್ರಯತ್ನವೂ ನಡೆಯುತ್ತಿದೆ.
ಕೈಗಾರಿಕಾ ಮಾಲಿನ್ಯಕ್ಕೂ ಕಠಿಣ ನಿಗಾ:
ವಾಹನಗಳು ಮತ್ತು ಧೂಳಿನ ಜೊತೆಗೆ ಕೈಗಾರಿಕೆಗಳಿಂದ ಹೊರಬರುವ ಮಾಲಿನ್ಯಕಾರಕಗಳ ಮೇಲೂ ನಿಗಾ ಹೆಚ್ಚಿಸಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸುವ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ. ಎಐ ಆಧಾರಿತ ಸಮಗ್ರ ನಿಯಂತ್ರಣ ಮತ್ತು ನಿರ್ವಹಣಾ ಕೇಂದ್ರ ಮೂಲಕ ವಿವಿಧ ಮೂಲಗಳಿಂದ ಬರುವ ಮಾಲಿನ್ಯ ಮಾಹಿತಿಯನ್ನು ಒಂದೇ ವ್ಯವಸ್ಥೆಯಲ್ಲಿ ವಿಶ್ಲೇಷಿಸಿ, ಅಗತ್ಯವಿದ್ದರೆ ಸ್ಥಳದಲ್ಲೇ ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನು ದೆಹಲಿ ಸರ್ಕಾರ ಆರಂಭಿಸಿದೆ. ಚಳಿಗಾಲದಲ್ಲಿ 78 ಕ್ಷೇತ್ರಮಟ್ಟದ ತಂಡಗಳನ್ನು ಜಿಪಿಎಸ್ ಸೌಲಭ್ಯ ಹೊಂದಿರುವ ವಾಹನಗಳೊಂದಿಗೆ ನಿಯೋಜಿಸಲಾಗುತ್ತಿದೆ.
ಜನರು ಏನು ಮಾಡಬೇಕು?
ಸರ್ಕಾರದ ಕ್ರಮಗಳ ಜೊತೆಗೆ ಸಾರ್ವಜನಿಕರ ಸಹಕಾರವೂ ಬಹಳ ಮುಖ್ಯ. ವಾಹನ ಮಾಲೀಕರು ತಮ್ಮ PUCC ಪ್ರಮಾಣಪತ್ರವನ್ನು ನವೀಕರಿಸಿಕೊಳ್ಳಬೇಕು. ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಸುವುದು, ಕಸ ಸುಡದಿರುವುದು ಮತ್ತು ನಿರ್ಮಾಣ ಸ್ಥಳಗಳಲ್ಲಿ ಧೂಳು ನಿಯಂತ್ರಣ ನಿಯಮಗಳನ್ನು ಪಾಲಿಸುವುದು ಅಗತ್ಯ.
ಅದೇ ರೀತಿ, ಮಾಲಿನ್ಯ ಹೆಚ್ಚಿರುವ ಸಂದರ್ಭದಲ್ಲಿ ಅನಗತ್ಯ ಖಾಸಗಿ ವಾಹನ ಬಳಕೆಯನ್ನು ಕಡಿಮೆ ಮಾಡುವುದು, ವಾಹನವನ್ನು ಸರಿಯಾಗಿ ನಿರ್ವಹಿಸುವುದು ಮತ್ತು ಸರ್ಕಾರದ ಸೂಚನೆಗಳನ್ನು ಪಾಲಿಸುವುದು ವಾಯುಮಾಲಿನ್ಯ ನಿಯಂತ್ರಣಕ್ಕೆ ನೆರವಾಗಬಹುದು.

