ಬೆಂಗಳೂರು: ರಾಜ್ಯದ ಕ್ರೀಡಾಪಟುಗಳಿಗೆ(Karnataka Athletes) ನೀಡಲಾಗುತ್ತಿರುವ ಬಹುಮಾನ ಮೊತ್ತವನ್ನು (Cash Prize) ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿ ಮರುಪರಿಶೀಲಿಸಲಾಗುತ್ತಿದ್ದು,ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ.ಕ್ರೀಡಾಪಟುಗಳಿಗೆ ಎಷ್ಟು ಬಹುಮಾನ ಮೊತ್ತ ನೀಡಬೇಕು ಎಂಬುದನ್ನು ನಾಳೆ ಘೋಷಿಸಲಾಗುವುದು ಎಂದು ಡಿಸಿಎಂ ಮತ್ತು ಕ್ರೀಡಾ ಸಚಿವ ಪರಮೇಶ್ವರ್(Parameshwar) ತಿಳಿಸಿದ್ದಾರೆ.
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗಿಯಾದ ಕನ್ನಡಿಗ ಕ್ರೀಡಾಪಟುಗಳಿಗೆ ಸರ್ಕಾರ ಗೌರವ ನೀಡಿಲ್ಲ ಎಂಬ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪೂವಮ್ಮ(Povamma) ಅವರು ಜಪಾನ್‌ನಲ್ಲಿದ್ದಾಗಲೇ ಅವರನ್ನು ಸಂಪರ್ಕಿಸಿ ಅಭಿನಂದಿಸಲು ಪ್ರಯತ್ನಿಸಿದ್ದೆವು. ಆದರೆ ಆಗ ಸಂಪರ್ಕ ಸಾಧ್ಯವಾಗಿರಲಿಲ್ಲ. ಅವರು ಭಾರತಕ್ಕೆ ಬಂದ ಒಂದೆರಡು ಗಂಟೆಯಲ್ಲೇ ನಾನು ಅವರನ್ನು ಸಂಪರ್ಕಿಸಿ ಮಾತನಾಡಿದ್ದೇನೆ.ಪೂವಮ್ಮ ಅವರಷ್ಟೇ ಅಲ್ಲ, ಬೇರೆ ಬೇರೆ ಅಥ್ಲೀಟ್‌ಗಳೊಂದಿಗೂ ಮಾತನಾಡಿದ್ದೇನೆ ಎಂದು ತಿಳಿಸಿದರು.
ನಾಳೆ ಮುಖ್ಯಮಂತ್ರಿಗಳು ಹಾಗೂ ನಾನು ಸರ್ಕಾರದ ವತಿಯಿಂದ ಕ್ರೀಡಾಪಟುಗಳಿಗೆ ನೀಡಬೇಕಾದ ಬಹುಮಾನ ಮೊತ್ತದ ಕುರಿತು ಘೋಷಣೆ ಮಾಡುತ್ತೇವೆ. ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಮೊತ್ತ ನೀಡಲಾಗುತ್ತಿದೆ ಎಂದು ಕ್ರೀಡಾಪಟುಗಳು ಹೇಳಿರುವ ಮಾಹಿತಿಯನ್ನೂ ತರಿಸಿಕೊಂಡಿದ್ದೇವೆ. ಅದನ್ನೆಲ್ಲ ಪರಿಶೀಲಿಸಿದ್ದೇವೆ. ನಮ್ಮಲ್ಲಿಯೂ ಬಹುಮಾನ ಮೊತ್ತವನ್ನು ಪುನರ್ ಪರಿಶೀಲಿಸಬೇಕು ಎಂಬ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಎಷ್ಟು ಮಾಡಬೇಕು ಎಂಬುದನ್ನು ನಾಳೆ ಘೋಷಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರ 46 ಸಾವಿರ ಕೋಟಿ ನಷ್ಟ, ಈ ವರ್ಷ ಜಿಎಸ್‌ಟಿ ಸಂಗ್ರಹ ಕುಸಿತ: ಜಿ. ಪರಮೇಶ್ವರ್
ಶುಲ್ಕ ಏರಿಕೆಗೆ ಸಮರ್ಥನೆ:
ಕಂದಾಯ ಇಲಾಖೆಯ ವಿವಿಧ ಸೇವೆಗಳ ಶುಲ್ಲ ಏರಿಕೆಯನ್ನು ಡಿಸಿಎಂ ಪರಮೇಶ್ವರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಜೀವನ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೆಲವು ಶುಲ್ಕಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.ಈಗ ಕಾಸ್ಟ್ ಆಫ್ ಲಿವಿಂಗ್ ಹೆಚ್ಚುತ್ತಿದೆ. ಪ್ರತಿಯೊಂದರ ಬೆಲೆ ಹೆಚ್ಚಾಗುತ್ತಿರುವಾಗ ಸ್ವಾಭಾವಿಕವಾಗಿ ಕೆಲವು ಸೇವೆಗಳ ಶುಲ್ಕವನ್ನೂ ಸ್ವಲ್ಪ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಇದು ಸಹಜವಾಗಿ ಆಗುವಂತಹದ್ದು ಎಂದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಣದಲ್ಲಿ ಕೊರತೆಯಾಗುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನದೇ ಆದ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗುತ್ತದೆ. ಆದ್ದರಿಂದ ಕೆಲವು ಶುಲ್ಕಗಳನ್ನು ಮಾರ್ಜಿನಲ್ ಆಗಿ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

