– ‘ಪಬ್ಲಿಕ್ ಟಿವಿ’ ವರದಿ ಬೆನ್ನಲ್ಲೇ ಕನ್ನಡಪರ ಸಂಘಟನೆಗಳ ಪ್ರತಿಭಟನೆ
ನೆಲಮಂಗಲ: ಕನ್ನಡಿಗ ಕಾರ್ಮಿಕನ ಮೇಲೆ ದರ್ಪ ತೋರಿ ಹಿಂದಿವಾಲನೊಬ್ಬ ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕಿರುವ ಘಟನೆ ನೆಲಮಂಗಲ (Nelamangala) ಬಳಿಯ ಹುಸ್ಕೂರು ರಸ್ತೆಯ ಖಾಸಗಿ ಗೋದಾಮಿನಲ್ಲಿ ನಡೆದಿದೆ. ‘ಪಬ್ಲಿಕ್ ಟಿವಿ’ ವರದಿಯಿಂದ ಕನ್ನಡಪರ ಸಂಘಟನೆಗಳ ಪ್ರತಿಭಟನೆ ಬೆನ್ನಲ್ಲೇ ಹಿಂದಿವಾಲ, ಕನ್ನಡಿಗರ ಕ್ಷಮೆಯಾಚಿಸಿದ್ದಾನೆ.
ಖಾಸಗಿ ಗೋದಾಮೊಂದರಲ್ಲಿ ರಾತ್ರಿ ಪಾಳಯದಲ್ಲಿ ಕನ್ನಡದ ಕಾರ್ಮಿಕರು ಕೆಲಸ ಮಾಡುವ ವೇಳೆ, ಹಿಂದಿ ಭಾಷೆಯ ಗೋದಾಮಿನ ಮೇಲ್ ವಿಚಾರಕನೊಬ್ಬ, ಕೆಲಸದ ವಿಚಾರದಲ್ಲಿ ತನಗೆ ಕನ್ನಡ ಬರಲ್ಲ ಎಂದಿದ್ದಾನೆ. ‘ಹಿಂದಿ ಕಲಿಯಿರಿ, ಹಿಂದಿ ಕಲಿತು ಕೆಲಸಕ್ಕೆ ಬರಬೇಕು. ಇಲ್ಲ ಅಂದರೆ ಕೆಲಸದಿಂದ ವಜಾ ಮಾಡಲಾಗುವುದು’ ಎಂದು ಧಮ್ಕಿ ಹಾಕಿದ್ದ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಈ ವಿಚಾರದಲ್ಲಿ ಸುದ್ದಿ ಪ್ರಸಾರದ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ನೆಲಮಂಗಲ ಬಳಿಯ ಹುಸ್ಕೂರು ಖಾಸಗಿ ಗೋದಾಮು ಮುಂದೆ ಪ್ರತಿಭಟನೆ ನಡೆಸಿದರು. ಕೂಡಲೇ ಹಿಂದಿವಾಲ ಅಶೋಕನನ್ನ ಕೆಲಸದಿಂದ ವಜಾ ಮಾಡಬೇಕು. ಆತ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಹಿಂದಿವಾಲ ಅಶೋಕನ ಸುದ್ದಿ ‘ಪಬ್ಲಿಕ್ ಟಿವಿ’ಯಲ್ಲಿ ಪ್ರಸಾರವಾದ ಬಳಿಕ ಹೆಚ್ಚೆತ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಿಂದಿವಾಲನಿಂದ ಕನ್ನಡ ಕಾರ್ಮಿಕನಿಗೆ ಧಮ್ಕಿ ವಿಚಾರದಲ್ಲಿ ಕನ್ನಡಿಗರ ಬಳಿ ಕ್ಷಮೆ ಯಾಚಿಸಿದ್ದಾನೆ. ‘ತಪ್ಪು ಮಾಡಿರುವೆ ಮುಂದೆ ಈ ರೀತಿ ತಪ್ಪು ಮಾಡುವುದಿಲ್ಲ ನನ್ನನ್ನು ಕ್ಷಮಿಸಿ ನಾನು ಕನ್ನಡದ ಬಗ್ಗೆ ಮಾತನಾಡಿರುವುದು ತಪ್ಪು’ ಎಂದು ಮನವಿ ಮಾಡಿದ್ದಾನೆ.

