– ಜ್ಞಾನೇಶ್ ಕುಮಾರ್ ವಿರುದ್ಧ ಏಕಪಕ್ಷೀಯ ನಿರ್ಧಾರ ಆರೋಪ
– ಮಧ್ಯಮ ವರದಿ ಆಧಾರದಲ್ಲಿ ವಜಾಗೊಳಿಸಲು ಸಾಧ್ಯವಿಲ್ಲ
ನವದೆಹಲಿ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಕಾನೂನುಬಾಹಿರತೆ ಹಾಗೂ ಶಾಸನಬದ್ಧ ‘ಫಾರ್ಮ್ 6’ ಬದಲಾವಣೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಚುನಾವಣಾ ಆಯೋಗಕ್ಕೆ (ECI) ನೋಟಿಸ್ ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ನೇತೃತ್ವದ ಪೀಠ, ಮಾಧ್ಯಮ ವರದಿಯ ಆಧಾರದಲ್ಲಿ ಜ್ಞಾನೇಶ್ ಕುಮಾರ್(Gyanesh Kumar) ಅವರನ್ನು ತಕ್ಷಣಕ್ಕೆ ಅಮಾನತುಗೊಳಿಸಲು ಅಥವಾ ಯಾವುದೇ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಅಷ್ಟೇ ಅಲ್ಲದೇ ವಿವಾದಿತ ನಿರ್ಧಾರಗಳಿಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದೆ.
ಚುನಾವಣಾ ಆಯೋಗವು ಬಹು-ಸದಸ್ಯ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಇಬ್ಬರು ಚುನಾವಣಾ ಆಯುಕ್ತರ ಸಮ್ಮತಿ ಇಲ್ಲದೆ ಸಿಇಸಿ ಏಕಪಕ್ಷೀಯವಾಗಿ ತೀರ್ಮಾನಗಳನ್ನು ಕೈಗೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: ಬಂಧಿಸಿ ಜೈಲಿಗಟ್ಟಿದರೆ ಸಮಸ್ಯೆಗೆ ಪರಿಹಾರ ಸಿಗಲ್ಲ- ಅಪರಾಧಿಗಳಿಗೆ ಭಯ ಹುಟ್ಟಿಸಿ: ದೆಹಲಿ ಪೊಲೀಸರಿಗೆ ಸುಪ್ರೀಂ ಸೂಚನೆ
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ, “ಇದು ರಾಷ್ಟ್ರೀಯ ಸಾಂವಿಧಾನಿಕ ಸಂಸ್ಥೆಯೊಂದರ ಕಾರ್ಯವೈಖರಿಗೆ ಸಂಬಂಧಿಸಿದ ಪ್ರಶ್ನೆ. ನಾವು ಈ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನೋಡಿ ಬೆಳೆದಿದ್ದೇವೆ, ಆದರೆ ಪ್ರಸ್ತುತ ಅಂತಹ ವಾತಾವರಣ ಉಳಿದಿಲ್ಲ,” ಎಂದು ಕಳವಳ ವ್ಯಕ್ತಪಡಿಸಿ, ಸಿಇಸಿ ನಡವಳಿಕೆ ಪ್ರಶ್ನಿಸಿರುವ ಮನವಿಯನ್ನು ಬಲವಾಗಿ ಸಮರ್ಥಿಸಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯಕಾಂತ್, ನಾವು ಕೂಡ ನಮ್ಮ ಹೋಂವರ್ಕ್ ಮಾಡಿಕೊಂಡೇ ಬಂದಿದ್ದೇವೆ, ಪ್ರಕರಣದ ಆಳ ನಮಗೂ ತಿಳಿದಿದೆ ಎಂದು ಹೇಳಿದರು.

