ಮಂಡ್ಯ: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಮಂಡ್ಯದ ಮನ್‌ಮುಲ್ (Manmul) ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಒಕ್ಕೂಟದ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ (Ummadahalli Shivappa) ಅವರನ್ನು ಮದ್ದೂರು ಪೊಲೀಸರು ನಿನ್ನೆ ತಡರಾತ್ರಿ ಬಂಧಿಸಿದ್ದಾರೆ.
ಪ್ರಕರಣದಲ್ಲಿ ಶಿವಪ್ಪ ಅವರ ಪಾತ್ರವಿರುವುದು ಮೇಲ್ನೋಟಕ್ಕೆ ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದು, ಇಂದು ಆರೋಪಿಯನ್ನು ಮದ್ದೂರು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಶಿಕ್ಷಣ ಕ್ಷೇತ್ರದ ಸೇವೆಗೆ ಗೌರವದ ಗರಿ: ಪ್ರಾಚಾರ್ಯ ರತ್ನ ಪ್ರೊ. ಶ್ರೀಕಂಠಯ್ಯ ಅವರಿಗೆ ಸನ್ಮಾನ
ಮುಖಾಮುಖಿ ವಿಚಾರಣೆ ವೇಳೆ ಬಯಲಾಯ್ತು ಸತ್ಯ
ಪ್ರಕರಣದ ಪ್ರಮುಖ ಆರೋಪಿ (A1) ಪ್ರದೀಪ್ ಕುಮಾರ್ ಜಾದವ್, ನಿರ್ದೇಶಕರೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆಯಲ್ಲಿ ಈ ಅಕ್ರಮ ದಂಧೆಯಲ್ಲಿ ಶಿವಪ್ಪ ಶಾಮೀಲಾಗಿರುವ ಬಗ್ಗೆ ಪ್ರಸ್ತಾಪಿಸಿದ್ದ ಎನ್ನಲಾಗಿತ್ತು. ಈ ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ನ್ಯಾಯಾಂಗ ಬಂಧನದಲ್ಲಿದ್ದ ಜಾದವ್‌ನನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದರು.
ಬಳಿಕ ಜಾದವ್ ಮತ್ತು ಮಾಜಿ ಅಧ್ಯಕ್ಷ ಶಿವಪ್ಪ ಇಬ್ಬರನ್ನೂ ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಲಾಯಿತು. ಈ ವೇಳೆ ಜಾದವ್ ನೇರವಾಗಿ ಶಿವಪ್ಪ ಅವರ ವಿರುದ್ಧವೇ ಅಕ್ರಮದ ಆರೋಪಗಳನ್ನು ಹೊರಿಸಿದ್ದು, ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ಕೂಡ ನಡೆದಿದೆ. ವಿಚಾರಣೆ ವೇಳೆ ಶಿವಪ್ಪ ಅವರ ಪಾತ್ರದ ಬಗ್ಗೆ ಸ್ಪಷ್ಟ ಸುಳಿವು ದೊರೆತ ಬೆನ್ನಲ್ಲೇ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಬಳಿ ನಡೆಯುವ ಕಾವೇರಿ ಆರತಿ ಮುಂದೂಡಿಕೆ
ಈ ಪ್ರಕರಣದಲ್ಲಿ ಈಗಾಗಲೇ ಪ್ರದೀಪ್ ಕುಮಾರ್ ಜಾದವ್ ಸೇರಿದಂತೆ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮಾಜಿ ಅಧ್ಯಕ್ಷ ಶಿವಪ್ಪ ಅವರ ಬಂಧನದೊಂದಿಗೆ ಈ ಜಾಲದಲ್ಲಿ ಸೆರೆಯಾದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮತ್ತಷ್ಟು ಮಂದಿಯ ವಿಚಾರಣೆ ನಡೆಯುವ ಸಾಧ್ಯತೆಯಿದೆ.

