– ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಅ.15ರಂದು ಬೃಹತ್ ಪ್ರತಿಭಟನೆ
ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಅಧಿಕೃತವಾಗಿ ‘ಇಂಡಿ’ ಮೈತ್ರಿಕೂಟ (INDIA bloc) ಸೇರಿಕೊಂಡಿದೆ. ಈ ಬಗ್ಗೆ ಟಿವಿಕೆ ಪಕ್ಷ ಅಧಿಕೃತ ನಿರ್ಧಾರ ಪ್ರಕಟಿಸಿದೆ.
ಚೆನ್ನೈನಲ್ಲಿರುವ ಕಾಂಗ್ರೆಸ್‌ನ (Congress) ‘ಸತ್ಯಮೂರ್ತಿ ಭವನ’ದಲ್ಲಿ ನಡೆದ ಮೈತ್ರಿಕೂಟದ ಸಭೆಯಲ್ಲಿ ಟಿವಿಕೆಯ ಇಬ್ಬರು ಸಚಿವರು ಭಾಗವಹಿಸುವ ಮೂಲಕ ಮೈತ್ರಿಕೂಟದೊಂದಿಗಿನ ಪಕ್ಷದ ಅಧಿಕೃತ ಸಹಭಾಗಿತ್ವಕ್ಕೆ ಚಾಲನೆ ನೀಡಿದರು.
ಈ ಮಹತ್ವದ ಸಭೆಯಲ್ಲಿ ಟಿವಿಕೆಯ ಚುನಾವಣಾ ನಿರ್ವಹಣಾ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ ಆಧಾರ್ ಅರ್ಜುನ್ ಮತ್ತು ಹಣಕಾಸು ಸಚಿವ ಮೇರಿ ವಿಲ್ಸನ್ ಪಕ್ಷವನ್ನು ಪ್ರತಿನಿಧಿಸಿದರು.
ಐತಿಹಾಸಿಕ ದಿನ ಎಂದ ತಮಿಳುನಾಡು ಕಾಂಗ್ರೆಸ್
ಟಿವಿಕೆ ಪಕ್ಷ ‘ಇಂಡಿ’ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿರುವುದನ್ನ ತಮಿಳುನಾಡು ಕಾಂಗ್ರೆಸ್ ಸಮಿತಿ (TNCC) ಅಧ್ಯಕ್ಷ ಮಣಿಕಂ ಟ್ಯಾಗೋರ್ ಸ್ವಾಗತಿಸಿದ್ದಾರೆ. ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿರುವ ಅವರು, ನಟ-ರಾಜಕಾರಣಿ ವಿಜಯ್ ಅವರ ಈ ನಿರ್ಧಾರದಿಂದ ಮೈತ್ರಿಕೂಟ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗ, ಸಿಇಸಿ ವಿರುದ್ಧ ಮೈತ್ರಿಕೂಟದ ಹೋರಾಟ
ಸಭೆಯಲ್ಲಿ ಮತ್ತೊಂದು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆಗಳನ್ನ ನಡೆಸಲು ‘ಇಂಡಿ’ ಮೈತ್ರಿಕೂಟ ನಿರ್ಧರಿಸಿದೆ. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವೇಳೆ ಚುನಾವಣಾ ಆಯೋಗವು ಮನಬಂದಂತೆ ಹಾಗೂ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸಿದೆ ಎಂಬುದು ಮೈತ್ರಿಕೂಟದ ಪಕ್ಷಗಳ ಆರೋಪವಾಗಿದೆ. ಈ ಪ್ರಕ್ರಿಯೆಯಿಂದಾಗಿ 13 ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಮೈತ್ರಿಕೂಟದ ನಾಯಕರು ಆರೋಪಿಸಿದ್ದಾರೆ.
ಅ.15ರಂದು ಚೆನ್ನೈನಲ್ಲಿ ಬೃಹತ್ ಪ್ರತಿಭಟನೆ
ಸಿಇಸಿಯನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂಬ ಆಗ್ರಹದೊಂದಿಗೆ ಇದೇ ಅಕ್ಟೋಬರ್ 15ರಂದು ಚೆನ್ನೈನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಟಿವಿಕೆ ಜೊತೆಗೆ ಕಾಂಗ್ರೆಸ್, ವಿಸಿಕೆ, ಸಿಪಿಐ, ಸಿಪಿಎಂ, ಐಯುಎಂಎಲ್, ಎಂಡಿಎಂಕೆ ಮತ್ತು ಸಿಪಿಐ(ಎಂಎಲ್) ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಪಾಲ್ಗೊಳ್ಳಲಿವೆ.

