– ಸಿಬಿಐ, ಇಡಿ, ಚುನಾವಣಾ ಆಯೋಗದ ವಿರುದ್ಧ ವ್ಯವಸ್ಥಿತ ದಾಳಿಗೆ ನಿರ್ದಿಷ್ಟ ಗುಂಪುಗಳ ನಿಯೋಜನೆ
– ವಿಪಕ್ಷಗಳಿಂದ ಭಾರತವನ್ನ ರಾಷ್ಟ್ರವಾಗಿ ದುರ್ಬಲಗೊಳಿಸುವ ದೊಡ್ಡ ಪಿತೂರಿ
ನವದೆಹಲಿ: ವಿರೋಧ ಪಕ್ಷಗಳು ಭಾರತವನ್ನು (India) ಒಂದು ರಾಷ್ಟ್ರವಾಗಿ ದುರ್ಬಲಗೊಳಿಸುವ ದೊಡ್ಡ ಪಿತೂರಿ ನಡೆಸುತ್ತಿವೆ. ಎಸ್ಐಆರ್ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗಳೆಲ್ಲವೂ ರಾಷ್ಟ್ರ ವಿರೋಧಿ ಶಕ್ತಿಗಳ ಪಿತೂರಿಯ ಭಾಗ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju) ವಾಗ್ದಾಳಿ ನಡೆಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (CEC Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿ ಮತ್ತು ಮುಂಬೈನಲ್ಲಿ ಸೇರಿದಂತೆ ದೇಶದ ವಿವಿಧೆಡೆ ನಡೆಸುತ್ತಿರುವ ಪ್ರತಿಭಟನೆ ಕುರಿತು ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಪದೇ ಪದೇ ಸೋಲಿನಿಂದ ಹತಾಶೆ
ವಿಪಕ್ಷಗಳು ಪದೇ ಪದೇ ಚುನಾವಣೆಯಲ್ಲಿ ಅನುಭವಿಸಿದ ಸೋಲುಗಳಿಂದ ಹತಾಶವಾಗಿವೆ. ಆದ್ದರಿಂದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ವ್ಯವಸ್ಥಿತ ದಾಳಿ ನಡೆಸುತ್ತಿವೆ ಎಂದು ರಿಜಿಜು ಆರೋಪಿಸಿದ್ದಾರೆ.

ವ್ಯವಸ್ಥಿತ ದಾಳಿಗೆ ಗುಂಪುಗಳ ನಿಯೋಜನೆ
ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ವ್ಯವಸ್ಥಿತ ದಾಳಿ ನಡೆಸಲು ವಿಪಕ್ಷಗಳು ನಿರ್ದಿಷ್ಟ ಗುಂಪುಗಳನ್ನ ನಿಯೋಜನೆ ಮಾಡಿವೆ. ಒಂದು ಗುಂಪು ನ್ಯಾಯಾಂಗ ಮತ್ತು ನ್ಯಾಯಾಧೀರ ವಿರುದ್ಧ ದಾಳಿ ನಡೆಸುತ್ತಿದೆ. ಸುಪ್ರೀಂ ಕೋರ್ಟ್ (Supreme Court) ಅಥವಾ ಹೈಕೋರ್ಟ್ಗಳಿಂದ ರಾಷ್ಟ್ರದ ಹಿತದೃಷ್ಟಿಯಿಂದ ಯಾವುದೇ ಉತ್ತಮ ತೀರ್ಪು ಬಂದರೂ, ಪ್ರಜಾಪ್ರಭುತ್ವ ತತ್ವಗಳನ್ನ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನ ದುರ್ಬಲಗೊಳಿಸುವ ಕ್ರಮ ಎಂದು ಆ ಗುಂಪು ಬಣ್ಣಿಸುತ್ತದೆ. ಈ ತೀರ್ಪು ಸರ್ಕಾರಕ್ಕೆ ಅನುಕೂಲಕರವಾಗಿದೆಯೇ ಹೊರತು, ದೇಶಕ್ಕೆ ಒಳ್ಳೆಯದಾಗಿಲ್ಲ ಎಂದು ಅಭಿಪ್ರಾಯ ಪಡುತ್ತವೆ.
ಮತ್ತೊಂದು ಗುಂಪು ಕೇಂದ್ರ ಚುನಾವಣಾ ಆಯೋಗ (Election Commission), ಜಾರಿ ನಿರ್ದೇಶನಾಲಯ, ಸಿಬಿಐ ನಂತಹ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆ ಕುಗ್ಗಿಸಲು ಪ್ರಯತ್ನಿಸುತ್ತಿದೆ. ಆ ಸಂಸ್ಥೆಗಳ ಸ್ವರೂಪ ಮತ್ತು ಘನತೆಯನ್ನು ಕುಗ್ಗಿಸುವುದು ಅದರ ಉದ್ದೇಶವಾಗಿದೆ. ಅದಕ್ಕಾಗಿಯೇ ಆ ಸಂಸ್ಥೆಗಳು ಯಾವುದೇ ಉತ್ತಮ ಕೆಲಸವನ್ನು ಮಾಡಿದ್ರೂ ಅದನ್ನ ಗುಂಪಿನ ಜನ ಪ್ರಶ್ನೆ ಮಾಡ್ತಾರೆ.

3ನೇ ಗುಂಪು ದೇಶದ ಪ್ರಗತಿಗೆ ಅಡ್ಡಿಪಡಿಸಲು ವಿದೇಶಗಳಲ್ಲಿ ಸುಳ್ಳು ಸುದ್ದಿಗಳನ್ನ ಹರಡುತ್ತಿದೆ. ಅಶಾಂತಿಯನ್ನ ಹರಡಲು ದೇಶವಿರೋಧಿ ಶಕ್ತಿಗಳು ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ. ಸುಳ್ಳು ಸುದ್ದಿಗಳನ್ನ ಹರಡುವುದು ಈ ಮೂಲಕ ಯುವಜನರ ಮನಸ್ಸಿನಲ್ಲಿ ಭಯ ಮತ್ತು ಅಸಮಾಧಾನ ಮೂಡಿಸುತ್ತದೆ ಆ ಗುಂಪು. ಅಷ್ಞೇ ಅಲ್ಲದೇ ಅದೇ ಗುಂಪಿನ ಜನ ವಿದೇಶಗಳಿಗೆ ತೆರಳಿ, ಭಾರತ ವಿರೋಧಿ ಶಕ್ತಿಗಳನ್ನ ಭೇಟಿಯಾಗಿ ಅವರಿಂದ ಬೆಂಬಲ ಪಡೆಯುತ್ತಾರೆ. ನಂತರ ಜಿಡಿಪಿ (GDP) ಅಂಕಿ-ಅಂಶಗಳು, ಪ್ರಜಾಪ್ರಭುತ್ವದ ತತ್ವಗಳು ಮತ್ತು ಭಾರತದ ಪ್ರಜಾಪ್ರಭುತ್ವದ ಯಶಸ್ಸಿನ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾರೆ. ಹೀಗೆ ಅವರು ಮೂರು ಗುಂಪುಗಳಾಗಿ ವ್ಯವಸ್ಥಿತವಾಗಿ ಭಾರತದ ಮೇಲೆ ದಾಳಿ ನಡೆಸುತ್ತಾ ಬಂದಿದ್ದಾರೆ ಎಂದರಲ್ಲದೇ ಎಸ್ಐಆರ್ ಪ್ರತಿಭಟನೆಗಳೂ ಕೂಡ ದೇಶ ವಿರೋಧಿ ಪಿತೂರಿಯ ಭಾಗ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಿಜವಾದ ಮತದಾರರಾಗಿದ್ದರೆ ಈ ಕೆಲಸ ಮಾಡ್ತಾರೆ
ಮುಂದುವರಿದು ಮಾತನಾಡಿರುವ ರಿಜಿಜು, ನೀವು ನಿಜವಾದ ಮತದಾರರಾಗಿದ್ದು, ನಿಮ್ಮ ಹೆಸರು ಮತಪಟ್ಟಿಯಿಂದ ಡಿಲೀಟ್ ಆಗಿದ್ದರೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಲಭ್ಯವಿರುವ ಪರಿಹಾರ ಕ್ರಮಗಳನ್ನ ಕೋರುತ್ತೀರಿ. ಅದನ್ನ ಬಿಟ್ಟು ದಾಖಲೆಗಳಿಲ್ಲದೆ ಗದ್ದಲ ಎಬ್ಬಿಸಿ ಚುನಾವಣಾ ಆಯೋಗವನ್ನ ಪ್ರಶ್ನಿಸುವುದು, ಪಿತೂರಿಯ ಭಾಗ ಎಂದು ರಿಜಿಜು ಗಂಭೀರ ಆರೋಪ ಮಾಡಿದ್ದಾರೆ.

