– ಎಸ್‌ಐಆರ್ ಪ್ರಕರಣದಲ್ಲಿ ಕೇಸ್ ಹಾಕುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ
– ಡಿಕೆಶಿ ನಕಲಿ ಮತಗಳ ರಕ್ಷಣೆಗಾಗಿ ಧರಣಿ ನಡೆಸುವ ನಾಟಕವಾಡಿದ್ದಾರೆ ಎಂದ ಸಂಸದ
ಹಾವೇರಿ: ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದವರು (Congress Party) ನಕಲಿ ಮತಗಳನ್ನ ಹಾಕಿಸಿಕೊಂಡು, ಒಂದೇ ವ್ಯಕ್ತಿ ಎರಡು ಕಡೆ ಮತಗಳನ್ನು ಹಾಕಿಸುವುದು ಅಥವಾ ಸತ್ತವರ ಹೆಸರಿನಲ್ಲಿ ಮತಗಳನ್ನು ಹಾಕಿಸಿಕೊಂಡು ಆಯ್ಕೆಯಾಗುತ್ತಿದ್ದರು. ಈಗ ಅವರಿಗೆ ತೊಂದರೆಯಾಗಿದೆ. ಹೀಗಾಗಿ ಸಿಎಂ ಡಿ.ಕೆ. ಶಿವಕುಮಾರ್ ಫೇಕ್ ಮತಗಳ ರಕ್ಷಣೆಗಾಗಿ ಚುನಾವಣಾಧಿಕಾರಿ ಕಚೇರಿ ಎದುರು ಧರಣಿ ನಡೆಸುವ ನಾಟಕವಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ.
We are in the process of SIR. It is totally illegal, unwanted, uncalled for and unbecoming of a Chief Minister. SIR is going as per the norms, and the Election Commissioner is taking care of it… They are just talking about minority votes… This is a high drama the Chief Minister… pic.twitter.com/kX145g01bG
— Basavaraj S Bommai (@BSBommai) October 4, 2026
ಹಾವೇರಿಯಲ್ಲಿ (Haveri) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭದಿಂದಲೂ ಬಹಳ ಸರಳವಾಗಿ ನಡೆದುಕೊಂಡು ಬರುತ್ತಿತ್ತು. ಪ್ರಾರಂಭದಲ್ಲಿ ಕಾಂಗ್ರೆಸ್‌ನವರು ಅಲ್ಲಲ್ಲಿ ಮಸೀದಿಯಲ್ಲಿ ಅರ್ಜಿ ತುಂಬಿಸುವುದಕ್ಕೆ ನಾವು ವಿರೋಧಿಸಿದ್ದೇವು. ಆದರೆ ನಂತರದ ಕ್ರಮಗಳ ಪ್ರಕಾರ ಇದು ಸರಳವಾಗಿ ಮುಗಿಯಬೇಕಿತ್ತು. ಅಕ್ಟೋಬರ್ 8 ರಂದು ಕರಡು ಮತ ಪಟ್ಟಿಯನ್ನು ಕೊಡಬೇಕಾಗಿತ್ತು. ಇಂತ ಸಂದರ್ಭದಲ್ಲಿ ಕಾಂಗ್ರೆಸ್ ನವರು ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಗೊಂದಲ ಸೃಷ್ಟಿಸಿದ್ದಾರೆ. ನಮ್ಮ ಪಕ್ಷದ ಪ್ರಮುಖರು ಚುನಾವಣಾಧಿಕಾರಿಯನ್ನ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಈಗ ಕಾನೂನು ಪ್ರಕಾರ ಎಲ್ಲವೂ ಹೊರಬರುತ್ತಿದೆ ಎಂದಿರುವ ಅವರು, ರಾಜ್ಯ ಸರ್ಕಾರಕ್ಕೆ (Karnataka Govt) ನೇರವಾಗಿ ಇದರ ವಿರುದ್ಧ ಕೇಸ್ ಹಾಕುವ ಯಾವುದೇ ಅಧಿಕಾರವಿಲ್ಲ. ಇದು ಸಂಪೂರ್ಣವಾಗಿ ಚುನಾವಣಾ ಅಧಿಕಾರಿಗಳು ಮಾಡಬೇಕಾದ ಕೆಲಸ. ಕಾನೂನಿನ ಪ್ರಕಾರ ಅರ್ಹರ ಮತಗಳು ಮಾತ್ರ ರಕ್ಷಿಸಲ್ಪಡಬೇಕು ಮತ್ತು ಅನರ್ಹರ ಮತಗಳನ್ನು ತೆಗೆದುಹಾಕಬೇಕು ಎನ್ನುವುದು ನಮ್ಮ ಸ್ಪಷ್ಟ ನಿಲುವು ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಡಿಲಿಮಿಟೇಶನ್ ಆಗಬೇಕು
ಸವಣೂರು ತಾಲೂಕು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಆಗಬೇಕು ಎನ್ನುವ ಬೇಡಿಕೆ ಕುರಿತು ಕೇಳಿದ್ರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಆಯೋಗದ ನಿಯಮಗಳ ಪ್ರಕಾರವೇ ಡಿಲಿಮಿಟೇಶನ್ (ಗಡಿ ನಿರ್ಣಯ) ಪ್ರಕ್ರಿಯೆ ನಡೆಯಬೇಕು, ಅದಾದ ಬಳಿಕ ಕೇಂದ್ರ ಮತ್ತು ರಾಜ್ಯ ಸಮಿತಿಗಳು ರಚನೆಯಾಗುತ್ತವೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಜನಸಂಖ್ಯೆ ಇರಬೇಕು ಎಂದು ನಿರ್ಧಾರ ಆಗುತ್ತದೆ. ಆ ಸಂದರ್ಭದಲ್ಲಿ ಅವರ ಮನವಿಯನ್ನ ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ಆತ್ಮಾವಲೋಕನ ಮಾಡಿಕೊಳ್ಳಲಿ
ಎಸ್‌ಐಆರ್ ಪ್ರಕ್ರಿಯೆ ಶುರುವಾದ ನಂತರ ನಡೆದ ಎಲ್ಲ ಚುನಾವಣೆಗಳನ್ನ ರದ್ದು ಪಡಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ಎಲ್ಲ ಕಡೆ ಸೋತಿದ್ದಾರೆ. ಅದಕ್ಕಾಗಿ ಕುಂಟು ನೆಪ ಹೇಳುತ್ತಿದ್ದಾರೆ. ಅವರ ಪಕ್ಷ ಯಾಕೆ ಸೋತಿದೆ ಅನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಜನ ಸೊಪ್ಪು ಹಾಕುವುದಿಲ್ಲ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮಾನತು ಮಾಡಬೇಕೆಂಬ ಬೇಡಿಕೆ ಕುರಿತು ಕೇಳಿದ ಪ್ರಶ್ಮೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಅವರ ಮಿತ್ರ ಪಕ್ಷದವರಿಗೆ ದೇಶದ ಅಭಿವೃದ್ಧಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರು ದೇಶದಲ್ಲಿ ಹೇಗಾದರೂ ಮಾಡಿ ದಂಗೆ ಎಬ್ಬಿಸಬೇಕೆಂದು ಬಯಸುತ್ತಿದ್ದಾರೆ. ಅದಕ್ಕೆ ದೇಶದ ಜನರು ಸೊಪ್ಪು ಹಾಕುವುದಿಲ್ಲ ಎಂದು ಹೇಳಿದರು.

