ಬೆಂಗಳೂರು: ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವೆ ಎಸ್‌ಐಆರ್ (SIR) ಎಫ್‌ಐಆರ್ ಫೈಟ್ ತಾರಕಕ್ಕೇರಿದೆ. ಸಿಎಂ ಮತ್ತು ಸಚಿವರ ವಿರುದ್ಧ ಬಿಜೆಪಿ ನಾಳೆ ಕೇಂದ್ರ ಚುನಾವಣಾ ಆಯೋಗಕ್ಕೆ (ECI) ದೂರು ಕೊಡಲಿದೆ. ಈ ಬೆನ್ನಲ್ಲೇ ಜಿಲ್ಲಾವಾರು ಸ್ಟೇಷನ್ ಮುತ್ತಿಗೆ ಹೋರಾಟ ತೀವ್ರಗೊಳಿಸಲಾಗುತ್ತಿದೆ. ನಾಳೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಗೆ ವೇದಿಕೆ ಸಿದ್ಧವಾಗಿದೆ.
ಎಸ್‌ಐಆರ್ ಎಫ್‌ಐಆರ್ ವಿರುದ್ಧ ಸರ್ಕಾರದ ಮೇಲೆ ಬಿಜೆಪಿ ಕೆರಳಿ ಕೆಂಡವಾಗಿದೆ. ನಾಳೆ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಕೊಡಲಿದ್ದಾರೆ. ಚುನಾವಣಾ ಆಯೋಗದ ಮುಂಭಾಗ ಪ್ರತಿಭಟನೆ ಮಾಡಿದ ಸಿಎಂ ಸಂಪುಟ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಿದ್ದಾರೆ. ಜೊತೆಗೆ ಫಾರ್ಮ್-7 ವಿಚಾರದಲ್ಲಿ ನಾಯಕರು ಸುಳ್ಳು ಹೇಳುತ್ತಿರುವ ವಿರುದ್ಧವೂ ದೂರು ಕೊಡಲಿದ್ದಾರೆ. ಇದನ್ನೂ ಓದಿ: 2027ರಲ್ಲಿ ಚುನಾವಣೆ ನಡೆಯಲಿರುವ ಪಂಚ ರಾಜ್ಯಗಳಿಗೆ ಈ ವಾರದಿಂದಲೇ ಆಯೋಗ ತಂಡಗಳು ಭೇಟಿ
ಇತ್ತ ಕಾರ್ಯಕರ್ತರ ಮೇಲಿನ ಎಫ್‌ಐಆರ್ ರದ್ದತಿಗೆ ಬಿಜೆಪಿ ನಾಯಕರ ಆಗ್ರಹಕ್ಕೆ ಸರ್ಕಾರ ಕ್ಯಾರೇ ಅಂದಿಲ್ಲ. ಎಫ್‌ಐಆರ್ ದಾಖಲಾಗಿರುವವರ ವಿಚಾರಣೆಗೆ ಪೊಲೀಸರು ಮುಂದಾಗುತ್ತಿದ್ದಾರೆ. ಬಳ್ಳಾರಿಯಲ್ಲಿ ಬಿಜೆಪಿ ಬಿಎಲ್‌ಎ1 ಆಗಿರುವ ಮೋತ್ಕರ್ ಶ್ರೀನಿವಾಸ್ ಮೇಲೆ ಸರ್ಚ್ ವಾರಂಟ್ ಹೊರಡಿಸಲಾಗಿದೆ. ತಾಳೂರು ರಸ್ತೆಯಲ್ಲಿರುವ ಮೋತ್ಕರ್ ಶ್ರೀನಿವಾಸ್ ಕಚೇರಿ ಮೇಲೆ ಪೊಲೀಸರು ಕೋರ್ಟ್ನಿಂದ ಸರ್ಚ್ ವಾರೆಂಟ್ ತಂದಿದ್ದಾರೆ. ಅಲ್ಲಿ ಕಾಂಗ್ರೆಸ್ ಬಿಎಲ್‌ಎ1 ಗೌತಮ್ ಕೊಟ್ಟಿದ್ದ ದೂರು ಆಧರಿಸಿ ಶ್ರೀನಿವಾಸ್ ಮೋತ್ಕರ್ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಹಿನ್ನೆಲೆ ನಾಳೆ ಬಳ್ಳಾರಿಯಲ್ಲಿ ಬೃಹತ್ ಹೊರಾಟಕ್ಕೆ ಬಿಜೆಪಿ ಕರೆ ಕೊಟ್ಟಿದೆ. ಎಫ್‌ಐಆರ್ ದಾಖಲಾದ ಠಾಣೆಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನಿ ಏಜೆಂಟ್‌ಗೆ ರಹಸ್ಯ ರಕ್ಷಣಾ ಮಾಹಿತಿ ಸೋರಿಕೆ – ನೌಕಾಪಡೆ ನಾವಿಕ ಬಂಧನ
ಇನ್ನು ಬೆಳಗಾವಿಯಲ್ಲೂ ಎಫ್‌ಐಆರ್ ದಾಖಲಿಸಿದವರ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ. ಬಿಜೆಪಿ ಮುಖಂಡ ರವಿ ಪಾಟೀಲ್ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಕ್ಟೋಬರ್ 1ರಂದು ರವಿ ಪಾಟೀಲ್ ಸೇರಿ 25 ಜನರ ಮೇಲೆ ಫಾರ್ಮ್-7 ದುರ್ಬಳಕೆ ಆರೋಪದಡಿ ದೂರು ದಾಖಲಿಸಲಾಗಿತ್ತು. ಇದನ್ನೂ ಓದಿ: MRPLನಲ್ಲಿ ಸ್ಫೋಟ: ಮೃತನ ನಿವಾಸಕ್ಕೆ ಸಿಡಿಸಿ ನಿರ್ದೇಶಕ ಪ್ರಶಾಂತ್ ಜತ್ತನ್ನ ಭೇಟಿ
ಸದ್ಯ ಬಿಜೆಪಿ ನಾಯಕರ ಮುಂದೆ ಹೋರಾಟವೊಂದೇ ಕೊನೆಯ ಆಪ್ಷನ್ ಆಗಿ ಉಳಿದಂತಿದೆ. ಎಫ್‌ಐಆರ್ ವಾಪಸ್ ಹಾಗೂ ಹೊಸ ಎಫ್‌ಐಆರ್ ಸ್ಥಗಿತಕ್ಕೆ ಬಿಜೆಪಿ ಡಿಮ್ಯಾಂಡ್ ಮಾಡಿದ್ರೂ ಸರ್ಕಾರ ಸೊಪ್ಪು ಹಾಕಿಲ್ಲ. ಸದ್ಯದಲ್ಲೇ ರಾಜ್ಯಾದ್ಯಂತ ಪೊಲೀಸ್ ಠಾಣೆ ಮುತ್ತಿಗೆಗೆ ಕರೆ ಕೊಡಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಕೆರೆಯಲ್ಲಿ ಮೀನುಗಳ ಮಾರಣಹೋಮ; ಕೆಮಿಕಲ್ ಮಿಶ್ರಣ ಶಂಕೆ

