– ಚುನಾವಣಾ ಸಿದ್ಧತೆಗಳೊಂದಿಗೆ EVM, VVPAT ಪರಿಶೀಲನೆಯೂ ಶುರು
ನವದೆಹಲಿ: ಮುಂಬರುವ ಪಂಚರಾಜ್ಯ ವಿಧಾನಸಭಾ ಚುನಾವಣೆಗಳಿಗೆ (Five States Poll) ಈಗಾಗಲೇ ಚುನಾವಣಾ ಆಯೋಗ ಸಿದ್ಧತೆಗಳನ್ನ ಚುರುಕುಗೊಳಿಸಿದೆ. ಇದರ ಭಾಗವಾಗಿ ಉಪ ಚುನಾವಣಾ ಆಯುಕ್ತರ ನೇತೃತ್ವದ ತಂಡಗಳು (EC Teams) ಕ್ಷೇತ್ರಮಟ್ಟದಲ್ಲಿ ಚುನಾವಣಾ ಪೂರ್ವಸಿದ್ಧತೆಗಳನ್ನ ಪರಿಶೀಲಿಸಲು ಈವಾರದಿಂದಲೇ 5 ರಾಜ್ಯಗಳಿಗೆ ಭೇಟಿ ಕೊಡಲಿದೆ.
ಅಧಿಕಾರಿಗಳ ಪ್ರಕಾರ, ಆಯೋಗದ ತಂಡವೊಂದು ಈವಾರ ಗೋವಾಗೆ (Goa) ಭೇಟಿ ನೀಡಲಿದ್ದು, ನಂತರದ ವಾರ ಉತ್ತರಾಖಂಡ, ಅದರ ಮುಂದಿನ ವಾರ ಪಂಜಾಬ್ ಮತ್ತು ಮಣಿಪುರಕ್ಕೆ ಭೇಟಿ ನೀಡಲಿದೆ. ಆದ್ರೆ ಉತ್ತರ ಪ್ರದೇಶಕ್ಕೆ (Uttar Pradesh) ಆಯೋಗ ತಂಡ ಭೇಟಿ ನೀಡುವ ವೇಳಾಪಟ್ಟಿಯನ್ನ ಇನ್ನೂ ಅಂತಿಮಗೊಳಿಸಿಲ್ಲ ಎಂದು ತಿಳಿದುಬಂದಿದೆ.
2027ರಲ್ಲಿ ಈ ಪಂಚ ರಾಜ್ಯಗಳಿಗೆ (ಉತ್ತರ ಪ್ರದೇಶ, ಗೋವಾ, ಮಣಿಪುರ (Manipura), ಪಂಜಾಬ್, ಉತ್ತರಾಖಂಡ) ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ 5 ರಾಜ್ಯಗಳು ಒಟ್ಟು 690 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದ್ದು, ಈ ಪೈಕಿ ಉತ್ತರ ಪ್ರದೇಶವೊಂದರಲ್ಲೇ 403 ಕ್ಷೇತ್ರಗಳಿವೆ.

ಉತ್ತರ ಪ್ರದೇಶ ವಿಧಾನಸಭೆಯ ಅವಧಿಯು 2027ರ ಮೇ 22ರಂದು ಕೊನೆಗೊಳ್ಳಲಿದೆ. ಗೋವಾ (Goa), ಮಣಿಪುರ, ಪಂಜಾಬ್ (Punjab) ಮತ್ತು ಉತ್ತರಾಖಂಡ ವಿಧಾನಸಭೆಗಳ ಅವಧಿಯು 2027ರ ಮಾರ್ಚ್ನಲ್ಲಿ ಮುಕ್ತಾಯಗೊಳ್ಳಲಿದೆ. ಅದ್ರೆ ಕಾನೂನಿನ ಅನ್ವಯ, ಹಾಲಿ ಅವಧಿ ಮುಗಿಯುವ 6 ತಿಂಗಳ ಮುಂಚಿತವಾಗಿಯೇ ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಯನ್ನ ನಡೆಸಬಹುದಾಗಿದೆ.
EVM, VVPAT ಪರಿಶೀಲನೆ ಶುರು
ಇನ್ನೂ ಚುನಾವಣಾ ಸಿದ್ಧತೆಗಳ ಭಾಗವಾಗಿ ಉತ್ತರ ಪ್ರದೇಶ ಮತ್ತು ಗೋವಾದಲ್ಲಿ ಚುನಾವಣೆಯಲ್ಲಿ ಬಳಸಲಾಗುವ ಎಲೆಕ್ಟ್ರಾನಿಕ್ ಮತಯಂತ್ರಗಳು (EVM) ಮತ್ತು VVPAT ಘಟಕಗಳ ‘ಮೊದಲ ಹಂತದ ಪರಿಶೀಲನೆ’ಯನ್ನು (FLC) ಈಗಾಗಲೇ ಪ್ರಾರಂಭಿಸಲಾಗಿದೆ.

FLC (ಮೊದಲ ಹಂತದ ಪರಿಶೀಲನೆ) ಎನ್ನುವುದು ಮತಯಂತ್ರಗಳು ಚುನಾವಣಾ ಪ್ರಕ್ರಿಯೆಯ ಮುಂದಿನ ಹಂತಗಳಿಗೆ ಪ್ರವೇಶಿಸುವ ಮೊದಲು ನಡೆಸಲಾಗುವ ವಿವರವಾದ ತಾಂತ್ರಿಕ ಪರಿಶೀಲನೆ. EVM ಮತ್ತು VVPATಗಳನ್ನ ತಯಾರಿಸುವ ಸಾರ್ವಜನಿಕ ವಲಯದ ಸಂಸ್ಥೆಗಳಾದ ‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ (BEL) ಮತ್ತು ‘ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್’ (ECIL) ನ ಎಂಜಿನಿಯರ್ಗಳು ಈ ಪರಿಶೀಲನೆಯನ್ನ ನಡೆಸುತ್ತಾರೆ.
ಒಂದು ವೇಳೆ ತಾಂತ್ರಿಕ ದೋಷಗಳಿದ್ದಲ್ಲಿ, ಅಂತಹ ಮತಯಂತ್ರಗಳನ್ನ ದುರಸ್ತಿ ಅಥವಾ ಬದಲಾವಣೆಗಾಗಿ ತಯಾರಕರಿಗೆ ಹಿಂತಿರುಗಿಸಲಾಗುತ್ತದೆ. ಈ ಪ್ರಕ್ರಿಯೆಯ ಸಮಯದಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ‘ಅಣಕು ಮತದಾನ’ವನ್ನೂ (mock poll) ನಡೆಸಲಾಗುತ್ತದೆ. ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಮತಗಳು ಉದ್ದೇಶಿಸಿದಂತೆಯೇ ದಾಖಲಾಗುತ್ತಿವೆಯೇ ಎಂಬುದನ್ನು ಪ್ರದರ್ಶಿಸುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ.

FLC (ಮೊದಲ ಹಂತದ ಪರಿಶೀಲನೆ) ಪ್ರಕ್ರಿಯೆಯು ಚುನಾವಣಾ ಆಯೋಗವು ಹೊರಡಿಸಿದ ವೇಳಾಪಟ್ಟಿಯಂತೆ ನಡೆಯುತ್ತದೆ ಮತ್ತು ಇದು ಒಟ್ಟಾರೆ ಚುನಾವಣಾ ಸಿದ್ಧತಾ ಪ್ರಕ್ರಿಯೆಯ ಒಂದು ಪ್ರಮುಖ ಭಾಗವಾಗಿದೆ.

