– ಅಭಿಷೇಕ್, ತಿಲಕ್ ಸ್ಫೋಟಕ ಫಿಫ್ಟಿ ಆಟಕ್ಕೆ ಒಲಿದ ಜಯ
– ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಸತತ 2ನೇ ಚಿನ್ನ
ನಿಸ್ಶಿನ್: ಏಷ್ಯನ್ ಗೇಮ್ಸ್ (Asian Games 2026) ಪುರುಷರ ಕ್ರಿಕೆಟ್ ಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ತಾನ ಮಣಿಸಿ ಭಾರತ ತಂಡ (Team India) ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಸತತ ಎರಡನೇ ಗೆಲುವಿನ ನಗೆ ಬೀರಿದೆ.
ನಿಶಿನ್‌ನಲ್ಲಿ ಶನಿವಾರ ನಡೆದ ಏಷ್ಯನ್ ಗೇಮ್ಸ್ 2026ರ ಪುರುಷರ ಕ್ರಿಕೆಟ್ ಫೈನಲ್‌ನಲ್ಲಿ, ತಿಲಕ್ ವರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಭಾರತವು ಪಾಕಿಸ್ತಾನವನ್ನು 19 ರನ್‌ಗಳಿಂದ ಸೋಲಿಸಿತು. ಇದನ್ನೂ ಓದಿ: Asian Games 2026: ಗಾಲ್ಫ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಮೈಸೂರಿನ ಪ್ರಣವಿ ಅರಸ್
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಪಾಕಿಸ್ತಾನದ ವಿರುದ್ಧ 20 ಓವರ್‌ಗಳಲ್ಲಿ 211/6 ರ ಬೃಹತ್ ಮೊತ್ತವನ್ನು ಕಲೆಹಾಕಿತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (28 ಎಸೆತಗಳಲ್ಲಿ 61 ರನ್) ಉತ್ತಮ ಅಡಿಪಾಯ ಹಾಕಿಕೊಟ್ಟರೆ, ತಿಲಕ್ ವರ್ಮಾ (ಔಟಾಗದೆ 22 ಎಸೆತಗಳಲ್ಲಿ 51 ರನ್) ಮತ್ತು ಶಿವಂ ದುಬೆ (14 ಎಸೆತಗಳಲ್ಲಿ 27 ರನ್) ಭಾರತದ ಮೊತ್ತವನ್ನು 200 ರನ್‌ಗಳ ಗಡಿ ದಾಟುವಂತೆ ಮಾಡಿದರು. ಪಾಕಿಸ್ತಾನದ ಪರವಾಗಿ ಎಡಗೈ ಸ್ಪಿನ್ನರ್ ಅರಾಫತ್ ಮಿನ್ಹಾಸ್ (2/25) ಮತ್ತು ವೇಗದ ಬೌಲರ್ ಅಹ್ಮದ್ ದನಿಯಾಲ್ (2/43) ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ನಂತರ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 19 ರನ್‌ಗಳಿಂದ ಸೋಲನುಭವಿಸಿತು. ಹಸನ್ ನವಾಜ್ 96, ಸೈಮ್ ಅಯೂಬ್ 29, ಮಾಝ್ ಸದಾಕತ್ 23 ರನ್ ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ 192 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ ತಲಾ 2 ವಿಕೆಟ್ ಪಡೆದ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಇದನ್ನೂ ಓದಿ: Asian Games 2026: ರಿಕರ್ವ್ ಅರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನ – ಇತಿಹಾಸ ಬರೆದ 17 ವರ್ಷದ ಕುಂಕುಮ್

