– ಮಹಾಲಿಂಗಪುರದ ನಕಲಿ ವೈದ್ಯೆಯ ಮನೆಗೆ ಆರೋಗ್ಯಾಧಿಕಾರಿಗಳ ದಾಳಿ
ಬಾಗಲಕೋಟೆ: ಅಕ್ರಮ ಗರ್ಭಪಾತ(Abortion Racket) ಹಾಗೂ ಹೆಣ್ಣು ಭ್ರೂಣಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಜಾಮೀನಿನ(Bail) ಮೇಲೆ ಹೊರಬಂದಿದ್ದ ನಕಲಿ ವೈದ್ಯೆಯೊಬ್ಬಳು, ಮತ್ತೆ ಅದೇ ಕರಾಳ ದಂಧೆಯಲ್ಲಿ ಸಕ್ರಿಯವಾಗಿರುವ ಗಂಭೀರ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಆಕೆಯ ಮನೆಗೆ ಭೇಟಿ ನೀಡಿ ಕಠಿಣ ಎಚ್ಚರಿಕೆಯ ನೋಟಿಸ್ ಅಂಟಿಸಿದ್ದಾರೆ.
ಮಹಾಲಿಂಗಪುರ ಪಟ್ಟಣದ ನಿವಾಸಿ ಕವಿತಾ ಬಾಡನವರ ಈ ಹಿಂದೆ ಲಿಂಗಪತ್ತೆ ಹಾಗೂ ಅಕ್ರಮ ಗರ್ಭಪಾತ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಳು. ಸುಮಾರು ಎರಡು ವರ್ಷಗಳ ಹಿಂದೆ ಈಕೆ ನಡೆಸಿದ ಅಕ್ರಮ ಗರ್ಭಪಾತದ ಅಡ್ಡಪರಿಣಾಮದಿಂದ (Side Effects) ಮಹಾರಾಷ್ಟ್ರ ಮೂಲದ ಮಹಿಳೆಯೊಬ್ಬಳು ಮೃತಪಟ್ಟಿದ್ದಳು. ಈ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ಕವಿತಾ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದ್ದು, ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದಾಳೆ.
ಜಾಮೀನಿನ ಮೇಲೆ ಬಂದ ಕೆಲವೇ ದಿನಗಳಲ್ಲಿ ಕವಿತಾ ಮತ್ತೆ ಹಳೆಯ ಚಾಳಿಯನ್ನು ಮುಂದುವರಿಸಿರುವ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಕಾರಿನಲ್ಲಿ ಮಹಾರಾಷ್ಟ್ರ ಮೂಲದ ಯುವತಿಯೊಬ್ಬಳು ತನ್ನ ಸಹಚರರೊಂದಿಗೆ ಗರ್ಭಪಾತ ಮಾಡಿಸಿಕೊಳ್ಳಲೆಂದೇ ಕವಿತಾ ಮನೆಗೆ ಬಂದಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ತಕ್ಷಣವೇ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಇದನ್ನೂ ಓದಿ: ಲಾರಿ, ಪಿಕಪ್ ವ್ಯಾನ್ ನಡುವೆ ಭೀಕರ ಅಪಘಾತ – ಏಳು ಮಂದಿ ದುರ್ಮರಣ, 21 ಜನರಿಗೆ ಗಾಯ
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮನೆಯ ಬಾಗಿಲಿಗೆ ಕಾನೂನು ನೋಟಿಸ್ ಅಂಟಿಸಿದ್ದಾರೆ. “ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು. ಮುಂದಿನ ಭೇಟಿಯ ವೇಳೆಯೂ ಮನೆಯಲ್ಲಿ ಹಾಜರಿರದಿದ್ದರೆ, ಕಾನೂನುಬದ್ಧವಾಗಿ ಬೀಗ ಮುರಿದು ಒಳಪ್ರವೇಶಿಸಿ ತಪಾಸಣೆ ನಡೆಸಲಾಗುವುದು” ಎಂದು ನೋಟಿಸ್‌ನಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

