ಬೆಂಗಳೂರು: ರಾಜ್ಯದಲ್ಲಿ ಮತದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಒಟ್ಟು ಮತದಾರರ ಸಂಖ್ಯೆ 4,49,81,740ಕ್ಕೆ ತಲುಪಿದೆ ಎಂದು ರಾಜ್ಯ ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸೆಪ್ಟೆಂಬರ್ 25ರವರೆಗೆ ರಾಜ್ಯದಲ್ಲಿ 4,48,44,080 ಇದ್ದ ಮತದಾರರ ಸಂಖ್ಯೆ, ಪರಿಷ್ಕರಣೆ ಮತ್ತು ನೋಟಿಸ್ ಪ್ರಕ್ರಿಯೆಯ ಬಳಿಕ 1,37,660ರಷ್ಟು ಹೆಚ್ಚಾಗಿದೆ.
ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಟ್ಟು 2,26,60,092 ಮಹಿಳಾ ಮತದಾರರಿದ್ದರೆ, ಪುರುಷ ಮತದಾರರ ಸಂಖ್ಯೆ 2,23,18,784 ಆಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ಒಟ್ಟು 43,82,306 ಮಂದಿಗೆ ನೋಟಿಸ್ ಜಾರಿ ಮಾಡಲು ಉದ್ದೇಶಿಸಲಾಗಿದ್ದು, ಈ ಪೈಕಿ ಈಗಾಗಲೇ 43,43,137 ಜನರಿಗೆ ನೋಟಿಸ್ ರವಾನಿಸಲಾಗಿದೆ. ಉಳಿದ 39,169 ಮಂದಿಗೆ ನೋಟಿಸ್ ನೀಡುವುದು ಬಾಕಿ ಇದೆ.
ನೋಟಿಸ್ ಜಾರಿಯಾದವರಲ್ಲಿ ಶೇ. 81.99ರಷ್ಟು ಜನರ ವಿಚಾರಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅಂದರೆ, 35,60,833 ಮತದಾರರ ಪರಿಶೀಲನೆ ಮುಗಿದಿದ್ದು, ಇನ್ನುಳಿದ 7,82,304 ಜನರ ವಿಚಾರಣೆ ಬಾಕಿ ಉಳಿದಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

84,900 ಆಕ್ಷೇಪಣೆ ಸಲ್ಲಿಕೆ:
ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅಥವಾ ಆಕ್ಷೇಪಣೆ ಸಲ್ಲಿಸಲು ಬಳಸುವ ‘ಫಾರ್ಮ್-7’ ಅಡಿಯಲ್ಲಿ ಇದುವರೆಗೆ ಒಟ್ಟು 84,900 ಅರ್ಜಿಗಳು ಆಯೋಗಕ್ಕೆ ಸಲ್ಲಿಕೆಯಾಗಿವೆ. ಫಾರ್ಮ್-7ರ ಅಡಿಯಲ್ಲಿ ಯಾರಾದರೂ ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಆಕ್ಷೇಪಣೆಗಳನ್ನು ಸಲ್ಲಿಸಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಎಚ್ಚರಿಸಿದೆ.
ಬೀದರ್‌ನಲ್ಲಿ(5,915 )ಅತಿ ಹೆಚ್ಚು ಫಾರ್ಮ್ 7 ಸಲ್ಲಿಕೆಯಾಗಿದ್ದರೆ ಯಾದಗಿರಿಯಲ್ಲಿ(609) ಕಡಿಮೆ ಸಂಖ್ಯೆಯಲ್ಲಿ ಸಲ್ಲಿಕೆಯಾಗಿದೆ.

ಯಾವ ಫಾರ್ಮ್ ಎಷ್ಟು ಸಲ್ಲಿಕೆ?
ಫಾರ್ಮ್ 6 – 8,85,952
ಫಾರ್ಮ್ 6ಎ – 4,648
ಫಾರ್ಮ್ 7 – 84,900
ಫಾರ್ಮ್ 8 – 11,78,028
ಒಟ್ಟು – 21,53,528

ಯಾವ ಫಾರ್ಮ್ ಏನು?
ಫಾರ್ಮ್ 6 : ಅರ್ಹ ನಾಗ ರಿಕರು ಮತದಾರರ ಪಟ್ಟಿಗೆ ಹೊಸದಾಗಿ ಹೆಸರನ್ನು ಸೇರಿಸಲು ಅಥವಾ ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವಿಳಾಸ ಬದಲಾಯಿಸಲು ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್ ಮೂಲಕ ಸಲ್ಲಿಸುವ ಕಡ್ಡಾಯ ಅರ್ಜಿ.
ಫಾರ್ಮ್ 6ಎ – ಅನಿವಾಸಿ ಭಾರತೀಯರು (NRI – Non-Resident Indians) ಭಾರತದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಸಲ್ಲಿಸಬೇಕಾದ ವಿಶೇಷ ಅರ್ಜಿ
ಫಾರ್ಮ್ 7 – ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅಥವಾ ಹೆಸರನ್ನು ಸೇರಿಸುವುದನ್ನು ಆಕ್ಷೇಪಿಸಲು ಇರುವ ಅರ್ಜಿ
ಫಾರ್ಮ್ 8 – ಚುನಾವಣಾ ಆಯೋಗದ Voters Service Portal ಮೂಲಕ ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ, ವಿವರಗಳ ತಿದ್ದುಪಡಿ ಅಥವಾ ಹೊಸ ಕಾರ್ಡ್ ಪಡೆಯಲು ಬಳಸುವ ಅರ್ಜಿ

