ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy Murder Case) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್(Darshan) ತೂಗುದೀಪ ಅವರನ್ನು ಭೇಟಿ ಮಾಡಲು ಆಗಮಿಸಿದ್ದ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ (Rachita Ram) ಅವರಿಗೆ ಭಾರೀ ನಿರಾಸೆಯಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಕಾದು ನಿಂತರೂ ದರ್ಶನ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದೆ ನಟಿ ಬೇಸರದಿಂದಲೇ ಕಾರನ್ನೇರಿ ವಾಪಸ್ ತೆರಳಿದ್ದಾರೆ.
ಜೈಲಿನಲ್ಲಿರುವ ತಮ್ಮ ನೆಚ್ಚಿನ ಸಹನಟ ದರ್ಶನ್ ಅವರನ್ನು ಭೇಟಿ ಮಾಡಲು ರಚಿತಾ ರಾಮ್ ಕಾರಾಗೃಹದ ಆವರಣಕ್ಕೆ ಆಗಮಿಸಿದ್ದರು. ನಿಯಮಾವಳಿಗಳ ಪ್ರಕಾರ ನಟಿಯ ಭೇಟಿ ವಿಚಾರವನ್ನು ಜೈಲಾಧಿಕಾರಿಗಳು ದರ್ಶನ್ ಅವರ ಗಮನಕ್ಕೆ ತಂದರು. ಆದರೆ, ಹೊರಗಿನಿಂದ ಯಾರೇ ಬಂದರೂ ತಾನು ಭೇಟಿಯಾಗುವುದಿಲ್ಲ ಎಂದು ದರ್ಶನ್ ನೇರವಾಗಿ ನಿರಾಕರಿಸಿದ್ದಾರೆ. ಎರಡು ಗಂಟೆಗಳ ಕಾಲ ನಿರೀಕ್ಷೆ ನಡೆಸಿದ ರಚಿತಾ ರಾಮ್, ಅಂತಿಮವಾಗಿ ಭೇಟಿಗೆ ಅನುಮತಿ ಸಿಗದ ಕಾರಣ ಜೈಲಿನಿಂದ ಹಿಂತಿರುಗಿದ್ದಾರೆ.
ಜೈಲಿನ ಮೂಲಗಳ ಪ್ರಕಾರ, ದರ್ಶನ್ ಅವರು ಕೇವಲ ತಮ್ಮ ಪತ್ನಿ ವಿಜಯಲಕ್ಷ್ಮಿ, ಮಗ, ತಾಯಿ ಹಾಗೂ ಸಹೋದರ ದಿನಕರ್ ತೂಗುದೀಪ ಅವರನ್ನು ಬಿಟ್ಟು ಹೊರಗಿನ ಯಾವುದೇ ಆಪ್ತರು ಅಥವಾ ಚಿತ್ರರಂಗದ ಸಹೋದ್ಯೋಗಿಗಳನ್ನು ಭೇಟಿಯಾಗಲು ಒಪ್ಪುತ್ತಿಲ್ಲ.
ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿದ ಬಳಿಕ ದರ್ಶನ್ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಕಾನೂನು ಸಂಕಷ್ಟ ಹಾಗೂ ಮಾಫಿ ಸಾಕ್ಷಿಯ ಭೀತಿಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಅವರು ಯಾರನ್ನೂ ಭೇಟಿಯಾಗುವ ಮನಸ್ಥಿತಿಯಲ್ಲಿಲ್ಲದೆ ಏಕಾಂತ ಬಯಸುತ್ತಿದ್ದಾರಾ ಎಂಬ ಪ್ರಶ್ನೆಗಳು ಎದ್ದಿದೆ.

