– ಗಗನದಲ್ಲಿ ತಪ್ಪಿದ ‘9/11’ ಮಾದರಿಯ ಭೀಕರ ದಾಳಿ
– 10 ವರ್ಷ ಸ್ಪೈಸ್‌ಜೆಟ್ ಹಾರಿಸಿದ್ದ ಪೈಲಟ್
ನವದೆಹಲಿ/ ಟೆಲ್ ಅವಿವ್: ಗಗನದಲ್ಲಿ 34 ಸಾವಿರ ಅಡಿ ಎತ್ತರ… ಕ್ಷಣಾರ್ಧದಲ್ಲಿ ವಿಮಾನ ಪತನಗೊಳಿಸಲು ಮುಂದಾದ ಸಹ-ಪೈಲಟ್… ರಕ್ತಸಿಕ್ತ ಕಾಕ್‌ಪಿಟ್‌ನಲ್ಲಿ ನಡೀತು ಭೀಕರ ಕಾಳಗ! ಸಾವು ಕಣ್ಣೆದುರೇ ಕಂಡರೂ ಎದೆಗುಂದದ ಆ ಭಾರತೀಯ ಪೈಲಟ್‌ನ ಅದ್ಭುತ ಸಮಯಪ್ರಜ್ಞೆ, ಇಂದು 174 ಅಮಾಯಕ ಜೀವಗಳನ್ನು ರಕ್ಷಿಸಿದೆ. ದುಬೈ-ಟೆಲ್ ಅವಿವ್ ವಿಮಾನದಲ್ಲಿ ಸಂಭವಿಸಬೇಕಿದ್ದ ಭೀಕರ ‘9/11’ ಮಾದರಿಯ ದುರಂತವನ್ನು ಒಬ್ಬ ಭಾರತೀಯ ಕ್ಯಾಪ್ಟನ್ ತನ್ನ ಉಸಿರು ಬಿಗಿಹಿಡಿದು ಹಿಮ್ಮೆಟ್ಟಿಸಿದ ಕಥೆಯಿದು.
ಹೌದು. ದುಬೈನಿಂದ(Dubai) ಇಸ್ರೇಲ್‌ನ ಟೆಲ್ ಅವಿವ್‌ಗೆ ಹೊರಟಿದ್ದ ಫ್ಲೈದುಬೈ (Fly Dubai) ವಿಮಾನದ ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ನಿಂದ ಮಾರಣಾಂತಿಕ ಹಲ್ಲೆಗೊಳಗಾದರೂ ಧೃತಿಗೆಡದೆ ವಿಮಾನದ ನಿಯಂತ್ರಣ ಸಾಧಿಸಿ 174 ಪ್ರಯಾಣಿಕರ ಜೀವ ಉಳಿಸಿದ ಮುಖ್ಯ ಪೈಲಟ್ ಭಾರತೀಯ ಪ್ರಜೆ ಎಂದು ಗುರುತಿಸಲಾಗಿದೆ.
ಭಾರತದ ಮಾಜಿ ಸ್ಪೈಸ್‌ಜೆಟ್ ಪೈಲಟ್ ಆಗಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಅವರೇ ಸಹ ಪೈಲಟ್‌ನೊಂದಿಗೆ ಜೀವದ ಹಂಗು ತೊರೆದು ಹೋರಾಡಿ ಸಾಹಸ ಮೆರೆದ ಭಾರತೀಯ ಪೈಲಟ್ ಎಂದು ಇಸ್ರೇಲ್(Israel) ಮಾಧ್ಯಮಗಳು ವರದಿ ಮಾಡಿವೆ.
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಭಾರತದ ಖಾಸಗಿ ವಿಮಾನಯಾನ ಸಂಸ್ಥೆಯಾದ ಸ್ಪೈಸ್‌ಜೆಟ್‌ನಲ್ಲಿ ಸುಮಾರು ಒಂದು ದಶಕದ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ 2022ರಲ್ಲಿ ಅವರು ಯುಎಇ(UAE) ಮೂಲದ ಫ್ಲೈದುಬೈ ಸಂಸ್ಥೆಗೆ ಸೇರ್ಪಡೆಗೊಂಡಿದ್ದರು ಎಂದು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.
CENAS DE TERROR NO AR
O voo FZ1073, da Flydubai, que seguia de Dubai para Tel Aviv, precisou fazer um pouso de emergência em Tabuk, na Arábia Saudita, após uma grave ocorrência dentro da cabine.
Relatos apontam que um dos pilotos atacou o outro com uma faca. A situação foi…— Rose 🟩🟨🟦 (@RoseBacellar) September 30, 2026
ಓಮನ್ ಪೈಲಟ್‌ನಿಂದ ದಾಳಿ:
ಫ್ಲೈದುಬೈ ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು 174 ಪ್ರಯಾಣಿಕರೊಂದಿಗೆ ದುಬೈನಿಂದ ಟೆಲ್ ಅವಿವ್ ಕಡೆಗೆ ಹಾರಾಟ ನಡೆಸುತ್ತಿತ್ತು. ಟೇಕಾಫ್ ಆದ ಸುಮಾರು ಎರಡು ಗಂಟೆಗಳ ನಂತರ ಕಾಕ್‌ಪಿಟ್ ಒಳಗೆ ಇಬ್ಬರು ಪೈಲಟ್‌ಗಳ ನಡುವೆ ತೀವ್ರ ಸಂಘರ್ಷ ಶುರುವಾಗಿದೆ.
ಓಮನ್ ಪ್ರಜೆಯಾಗಿರುವ ಸಹ-ಪೈಲಟ್, ಮುಖ್ಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ದಾಳಿಯಿಂದ ರಕ್ತಸಿಕ್ತವಾಗಿ ತೀವ್ರ ಗಾಯಗೊಂಡರೂ ಕ್ಯಾಪ್ಟನ್ ಸ್ಮಿತ್ ಅದ್ಭುತ ಧೈರ್ಯ ತೋರಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಕಾಕ್‌ಪಿಟ್‌ನಿಂದ ಭಾರಿ ಚೀರಾಟ ಮತ್ತು ಗಲಾಟೆ ಕೇಳಿಬಂದ ತಕ್ಷಣವೇ ಎಚ್ಚೆತ್ತ ವಿಮಾನ ಸಿಬ್ಬಂದಿ ಹಾಗೂ ಕೆಲ ಧೈರ್ಯಶಾಲಿ ಪ್ರಯಾಣಿಕರು ಒಳನುಗ್ಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಓಮನ್ ಪ್ರಜೆಯಾಗಿರುವ ಪೈಲಟ್ ಇನ್ನೊಬ್ಬನಿಗೆ ಚಾಕುವಿನಿಂದ ಇರಿದು ಅಮೆರಿಕದಲ್ಲಿ ನಡೆದ 9/11 ಮಾದರಿಯಲ್ಲೇ ವಿಮಾನವನ್ನು ನೆಲಕ್ಕಪ್ಪಳಿಸಲು ಅಥವಾ ಹೈಜಾಕ್ ಮಾಡಲು ಯತ್ನಿಸಿದ್ದಾನೆ. ಆದರೆ ಭಾರತೀಯ ಕ್ಯಾಪ್ಟನ್ ತೀವ್ರವಾಗಿ ಗಾಯಗೊಂಡಿದ್ದರೂ ಆತನ ವಿರುದ್ಧ ಮರುಹೋರಾಟ ನಡೆಸಿ ವಿಮಾನ ಅಪಘಾತಕ್ಕೀಡಾಗುವುದನ್ನು ತಪ್ಪಿಸಿದ್ದಾರೆ ಎಂದು ಇಸ್ರೇಲಿ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
❗📹 ‘Two Other Pilots Took Control’: Passenger’s Mother Recounts Flydubai Mid-Air Scare
“He took a knife and tried to kill the pilot,” recounted a passenger’s mother, adding that her daughter heard screams and calls for help before the plane began to lose control.
Israeli… https://t.co/4shM811Qnl pic.twitter.com/OsLwlfCd8W
— RT_India (@RT_India_news) September 30, 2026
ವಿಮಾನದಲ್ಲಿ ನಡೆದಿದ್ದು ಏನು?
ತನ್ನ ಮೇಲೆ ಚಾಕು ಇರಿದಾಗ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಜೋರಾಗಿ ಕಿರುಚಿದ್ದಾರೆ. ಈ ವೇಳೆ ಮಹಿಳಾ ಪ್ರಯಾಣಿಕರು ಕೂಡಲೇ ಕಾಕ್‌ಪಿಟ್‌ಗೆ ಧಾವಿಸಿದಾಗ ಒಳಗೆಲ್ಲಾ ರಕ್ತಸಿಕ್ತವಾಗಿದ್ದು ಕಂಡುಬಂತು. ಕೂಡಲೇ ಆಕೆ ಕಿರುಚಿಕೊಂಡು ಸಹಾಯಕ್ಕಾಗಿ ಇತರರನ್ನು ಕರೆದಿದ್ದಾರೆ.
ಮುಂಭಾಗದ ಸೀಟುಗಳಲ್ಲಿದ್ದ ಹಲವು ಇಸ್ರೇಲಿ ಪ್ರಯಾಣಿಕರು ತಕ್ಷಣ ಕಾಕ್‌ಪಿಟ್‌ಗೆ ನುಗ್ಗಿ, ದಾಳಿ ನಡೆಸುತ್ತಿದ್ದ ಓಮನ್ ಸಹ-ಪೈಲಟ್‌ನನ್ನು ಹಿಡಿದು ನಿಯಂತ್ರಣಕ್ಕೆ ತಂದಿದ್ದಾರೆ. ಈ ವೇಳೆ ವಿಮಾನದಲ್ಲೇ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದ ಇಬ್ಬರು ‘ಆಫ್-ಡ್ಯೂಟಿ’ ಪೈಲಟ್‌ಗಳು ಕೂಡಲೇ ಪರಿಸ್ಥಿತಿಯನ್ನು ನಿಭಾಯಿಸಿ, ಕಾಕ್‌ಪಿಟ್ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡು ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ.
ಚಾಕು ಇರಿತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಭಾರತೀಯ ಕ್ಯಾಪ್ಟನ್‌ಗೆ ಅದೇ ವಿಮಾನದಲ್ಲಿದ್ದ ಇಸ್ರೇಲ್‌ನ ದಂತವೈದ್ಯರೊಬ್ಬರು ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ರಕ್ತಸ್ರಾವ ತಡೆದಿದ್ದಾರೆ. ಇದರಿಂದಾಗಿ ಅವರ ಪ್ರಾಣ ಉಳಿಯಲು ಸಾಧ್ಯವಾಯಿತು ಎಂದು ಸಹಪ್ರಯಾಣಿಕರು ತಿಳಿಸಿದ್ದಾರೆ. ಸದ್ಯ ಇಬ್ಬರೂ ಪೈಲಟ್‌ಗಳು ಸೌದಿ ಅರೇಬಿಯಾದ ತಬೂಕ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರಬ್ ಅಥವಾ ಕೊಲ್ಲಿ ರಾಷ್ಟ್ರಗಳ ವಿಮಾನ ಸಿಬ್ಬಂದಿ ಇಸ್ರೇಲ್ ವಾಯುಪ್ರದೇಶ ಪ್ರವೇಶಿಸುವ ಮೊದಲು ಅತ್ಯಂತ ಕಠಿಣ ಭದ್ರತಾ ತಪಾಸಣೆಗೆ ಒಳಪಡುತ್ತಾರೆ. ಇಷ್ಟಿದ್ದರೂ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಿಂದ ಫ್ಲೈದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಓಮನ್ ಪೈಲಟ್‌ಗೆ ಇಸ್ರೇಲ್ ವಿಮಾನ ಚಲಾಯಿಸಲು ಹೇಗೆ ಅನುಮತಿ ಸಿಕ್ಕಿತು? ಆತನಿಗೆ ದ್ವಿಪೌರತ್ವ ಇತ್ತೇ ಎಂಬ ಬಗ್ಗೆ ಇಸ್ರೇಲ್ ಭದ್ರತಾ ಸಂಸ್ಥೆಗಳು ಸಮಗ್ರ ತನಿಖೆ ಆರಂಭಿಸಿವೆ.
ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಫ್ಲೈದುಬೈ ಖಚಿತಪಡಿಸಿದೆ. ಅಲ್ಲದೆ, ತಬೂಕ್‌ನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಇಸ್ರೇಲ್‌ಗೆ ಕರೆದೊಯ್ಯಲು ಮತ್ತೊಂದು ಪರ್ಯಾಯ ವಿಮಾನವನ್ನು ಕಳುಹಿಸಲಾಗಿದೆ. ಸಹ-ಪೈಲಟ್ ವಿಮಾನವನ್ನು ಅಪಘಾತಕ್ಕೀಡುಮಾಡಲು ಸಂಚು ರೂಪಿಸಿದ್ದನೇ ಎಂಬ ಆಯಾಮದಲ್ಲಿ ಸೌದಿ ಮತ್ತು ಇಸ್ರೇಲ್ ಭದ್ರತಾ ಸಂಸ್ಥೆಗಳು ತನಿಖೆ ಕೈಗೆತ್ತಿಕೊಂಡಿದ್ದು, ಫ್ಲೈದುಬೈ ಕೂಡ ಆಂತರಿಕ ತನಿಖೆಗೆ ಆದೇಶಿಸಿದೆ.

