ಅಹಮದಾಬಾದ್: ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಗುಜರಾತ್ ಎಟಿಎಸ್ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ ಇರಾನಿನ ದೋಣಿಯಿಂದ 526 ಕೆಜಿಗೂ ಹೆಚ್ಚು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ.
ವಶಪಡಿಸಿಕೊಂಡ ಹೆರಾಯಿನ್ ಮತ್ತು ಮೆಥಾಂಫೆಟಮೈನ್‌ನ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ 3,000 ಕೋಟಿಗೂ ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೋಣಿಯಲ್ಲಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ.
ಸೆಪ್ಟೆಂಬರ್ 25ರಂದು ಲಕ್ಷದ್ವೀಪದ ಪಶ್ಚಿಮ ಭಾಗದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಗುಪ್ತಚರ ಮಾಹಿತಿ ಆಧರಿಸಿ ಭಾರತೀಯ ಕರಾವಳಿ ಕಾವಲು ಪಡೆ ಸಮುದ್ರ ಮತ್ತು ವಾಯು ಮಾರ್ಗದ ಮೂಲಕ ಅನುಮಾನಾಸ್ಪದ ದೋಣಿಯ ಮೇಲೆ ನಿರಂತರ ನಿಗಾ ಇರಿಸಿತ್ತು. ಬಳಿಕ ಬೆನ್ನಟ್ಟಿ ದೋಣಿಯನ್ನು ತಡೆದು, ಸಿಬ್ಬಂದಿ ಬೋರ್ಡಿಂಗ್ ಕಾರ್ಯಾಚರಣೆ ನಡೆಸಿದ್ದಾರೆ.
ಮುಂಬೈಗೆ ಕರೆತಂದ ದೋಣಿ
ಕಾರ್ಯಾಚರಣೆ ಬಳಿಕ ವಶಪಡಿಸಿಕೊಂಡ ಮಾದಕವಸ್ತುಗಳು, ದೋಣಿ ಮತ್ತು ಅದರಲ್ಲಿದ್ದ ಸಿಬ್ಬಂದಿಯನ್ನು ಸಶಸ್ತ್ರ ಭದ್ರತೆಯೊಂದಿಗೆ ಮುಂಬೈಗೆ ಕರೆತರಲಾಗಿದೆ. ಇಲ್ಲಿ ವಿವಿಧ ತನಿಖಾ ಸಂಸ್ಥೆಗಳು ಜಂಟಿಯಾಗಿ ವಿಚಾರಣೆ ನಡೆಸಲಿವೆ.
ವಶಪಡಿಸಿಕೊಂಡ ಸರಕಿನ ಮೂಲ, ಅದರ ಮಾಲೀಕತ್ವ ಹಾಗೂ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದನ್ನು ಪತ್ತೆಹಚ್ಚಲು ಐವರು ಪಾಕಿಸ್ತಾನಿ ಪ್ರಜೆಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ಕಳ್ಳಸಾಗಣೆ ಹಿಂದೆ ಇರುವ ಜಾಲದ ಬಗ್ಗೆಯೂ ತನಿಖೆ ಮುಂದುವರಿದಿದೆ.
ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ
ಗುಜರಾತ್ ಎಟಿಎಸ್ ಹಾಗೂ ಕೇಂದ್ರ ಗುಪ್ತಚರ ಸಂಸ್ಥೆಗಳಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಅನುಮಾನಾಸ್ಪದ ದೋಣಿಯ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು. ಅದರಂತೆ ಭಾರತೀಯ ಕರಾವಳಿ ಕಾವಲು ಪಡೆ ಸಮುದ್ರ ಮತ್ತು ವಾಯು ಕಣ್ಗಾವಲು ನಡೆಸಿ ದೋಣಿಯನ್ನು ಪತ್ತೆಹಚ್ಚಿತ್ತು.ಇದನ್ನೂ ಓದಿ: ರಾವೆನ್ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಧ್ರುವ ಸರ್ಜಾ
ಕರಾವಳಿ ಕಾವಲು ಪಡೆಯ ಪ್ರಕಾರ, ಈ ಕಾರ್ಯಾಚರಣೆ ಸಮುದ್ರ ಮಾರ್ಗದ ಮೂಲಕ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ತಡೆಯುವ ಪ್ರಯತ್ನದ ಭಾಗವಾಗಿದೆ.
ಗುಜರಾತ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಮುದ್ರ ಮಾರ್ಗದ ಮೂಲಕ ನಡೆಯುವ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ಮುಂದುವರಿಸಿವೆ. ಇದನ್ನೂ ಓದಿ: ಆಟೋ ಚಾಲಕರಿಗಾಗಿ ಬಣ್ಣ ಹಚ್ಚಿದ ವಿಜಯ್ ರಾಘವೇಂದ್ರ

