ಮೈಸೂರು ದಸರಾ (Mysuru Dasara) ಎಂದರೆ ಕೇವಲ ಅರಮನೆಯ ವೈಭವ, ಜಂಬೂಸವಾರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಷ್ಟೇ ಅಲ್ಲ; ಕರ್ನಾಟಕದ ವಿವಿಧ ಭಾಗಗಳ ಜನಪದ ಕಲೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮಹೋತ್ಸವವೂ ಹೌದು. ಈ ಬಾರಿಯ ದಸರಾದಲ್ಲಿ (Dasara) ಕರಾವಳಿಯ ಹೆಮ್ಮೆಯ ಕಂಬಳದ (Kambala) ಸೊಗಡಿಗೂ ಅವಕಾಶ ಸಿಕ್ಕಿರುವುದು ವಿಶೇಷ.
ಕೆಸರು ಗದ್ದೆಯಲ್ಲಿ ಕೋಣಗಳ ಓಟ, ರೈತರ ಉತ್ಸಾಹ ಹಾಗೂ ಕರಾವಳಿಯ ಜನಪದ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಕಂಬಳ, ಮೈಸೂರಿನ ದಸರಾ ಸಂಭ್ರಮಕ್ಕೆ ಹೊಸ ಆಯಾಮ ನೀಡಲಿದೆ. ಒಂದು ಭಾಗದ ಆಚರಣೆ ಮತ್ತೊಂದು ಭಾಗದ ಜನರಿಗೆ ಪರಿಚಯವಾಗುವ ಮೂಲಕ ಕರ್ನಾಟಕದ ವೈವಿಧ್ಯಮಯ ಸಂಸ್ಕೃತಿಯ ನಡುವಿನ ಕೊಂಡಿ ಮತ್ತಷ್ಟು ಗಟ್ಟಿಯಾಗುವ ಭರವಸೆ ಇದೆ.

ಈ ಬಾರಿ ಮೈಸೂರು ದಸರಾದಲ್ಲಿ ಜಂಬೂ ಸವಾರಿ ಹಾಗೂ ಕರಾವಳಿಯ ಸಂಸ್ಕೃತಿ ಎರಡೂ ಸೇರಿ ವಿಶೇಷವಾದ ಆಚರಣೆ ನಡೆಯುತ್ತಿದೆ. ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಮೈಸೂರು ದಸರಾದಲ್ಲಿ ವೇದಿಕೆ ಸಜ್ಜಾಗಿದೆ. ಹೌದು, ಈ ಬಾರಿ ಇದೇ ಬರುವ ಅ.18 ಮತ್ತು 19ರಂದು ಮೈಸೂರಿನಲ್ಲಿ ಭರ್ಜರಿ ಕಂಬಳ ನಡೆಯಲಿದೆ. 150 ರಿಂದ 160 ಜೊತೆ ಆಯ್ದ ಪ್ರಸಿದ್ಧ ಕೋಣಗಳು ಮೈಸೂರು ದಸರಾ ಕಂಬಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ದಸರಾ ಕಂಬಳ ತಯಾರಿ, ಕಂಬಳದ ಅಬ್ಬರ ಹೇಗಿರಲಿದೆ? ಕಂಬಳದ ಇತಿಹಾಸವೇನು? ಜೊತೆಗೆ ವಿಶೇಷ ಸಂಸ್ಕೃತಿಗಳ ಎರವಲು ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.
‘ವಿಜಯ ದಶಮಿ’ ಸಜ್ಜು!
ಮೈಸೂರಿನ ರಿಂಗ್ ರೋಡ್ ವ್ಯಾಪ್ತಿಯ ಸುಮಾರು 20 ಎಕರೆ ವಿಸ್ತೀರ್ಣದ ಜಾಗದಲ್ಲಿ ಕಂಬಳದ ಕರೆಯ ನಿರ್ಮಾಣ ಕಾರ್ಯ ಈಗಾಗಲೇ ಭರದಿಂದ ಸಾಗಿದೆ. ಜಿಲ್ಲಾಡಳಿತ ಈ ಕರೆಗೆ ‘ವಿಜಯ ದಶಮಿ’ ಎಂದು ನಾಮಕರಣ ಮಾಡಿದೆ. ಕರೆಯ ಒಟ್ಟು ಉದ್ದ 147 ಮೀಟರ್ ಆಗಿದ್ದು, ಓಟದ ಅಂತರ 140 ಮೀಟರ್ ಇರಲಿದೆ. ಕರೆಯ ಗುಣಮಟ್ಟ ಹಾಗೂ ಕೋಣಗಳ ಸುರಕ್ಷತೆಗಾಗಿ ಅಕ್ಟೋಬರ್ 15ರಂದೇ 5 ಜೊತೆ ಕೋಣಗಳನ್ನು ಕರೆದೊಯ್ದು ಪ್ರಾಯೋಗಿಕ ಓಡಿಸಲು ತೀರ್ಮಾನಿಸಲಾಗಿದೆ.
ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಿಂದ ಕೋಣಗಳ ಪಯಣ
ಅ.16ರಂದು ಬೆಳಿಗ್ಗೆ 10:30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕೋಣಗಳು ಜಮಾಯಿಸಿ, ಅಲ್ಲಿಂದ ಒಟ್ಟಾಗಿ ಮೈಸೂರಿನತ್ತ ವಾಹನದಲ್ಲಿ ತೆರಳಲಿವೆ. ಹೀಗೆ ಹೊರಟ ಕೋಣಗಳಿಗೆ ಮಡಿಕೇರಿಯಲ್ಲಿ ಸುಮಾರು 2 ರಿಂದ 3 ಗಂಟೆಗಳ ಕಾಲ ವಿಶ್ರಾಂತಿ ನೀಡಲಾಗುತ್ತದೆ. ಅಲ್ಲಿ ಮೇವು, ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಅ.16ರ ರಾತ್ರಿ ಮೈಸೂರು ತಲುಪಲಿರುವ ಕೋಣಗಳಿಗೆ, ಅಕ್ಟೋಬರ್ 17ರ ಇಡೀ ದಿನ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ.
ಅ.18-19ರಂದು ಕಂಬಳದ ಅಬ್ಬರ
18ರಂದು ಬೆಳಿಗ್ಗೆ ಕಂಬಳ ಆರಂಭವಾಗಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಅಕ್ಟೋಬರ್ 19ರ ತಡರಾತ್ರಿ 12 ಗಂಟೆಯೊಳಗೆ ಬಹುಮಾನ ವಿತರಣೆಯೊಂದಿಗೆ ಕಂಬಳ ಪೂರ್ಣಗೊಳ್ಳಲಿದೆ.

ಮೊದಲ ಬಹುಮಾನ 16 ಗ್ರಾಂ ಚಿನ್ನ
ಕಂಬಳದಲ್ಲಿ ಗೆದ್ದ ಸೀನಿಯರ್ ವಿಭಾಗದ ಕೋಣಗಳ ಜೋಡಿಗೆ ಮೊದಲ ಬಹುಮಾನ 16 ಗ್ರಾಂ ಚಿನ್ನ ಹಾಗೂ ದ್ವಿತೀಯ ಬಹುಮಾನ 8 ಗ್ರಾಂ ಚಿನ್ನ ನೀಡಲು ನಿರ್ಧರಿಸಲಾಗಿದೆ. ಆದರೆ, ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದವರಿಗೂ ಚಿನ್ನದ ಪದಕ ನೀಡಬೇಕು ಹಾಗೂ ಜೂನಿಯರ್ ವಿಭಾಗದಲ್ಲೂ ಬಹುಮಾನ ಪ್ರಮಾಣ ಹೆಚ್ಚಿಸಬೇಕು ಎಂದು ಕೋಣಗಳ ಮಾಲೀಕರು ಬೇಡಿಕೆ ಇಟ್ಟಿದ್ದಾರೆ. ಕಂಬಳದಲ್ಲಿ ಭಾಗವಹಿಸುವ ಎಲ್ಲ ಕೋಣಗಳ ಯಜಮಾನರಿಗೆ ಮೈಸೂರು ದಸರಾದ ಪ್ರಶಸ್ತಿ ಪತ್ರ, ಸ್ಮರಣಿಕೆ, ಮೈಸೂರು ಪೇಟ ಮತ್ತು ಶಾಲು ಹೊದಿಸಿ ಗೌರವಿಸಲಾಗುತ್ತದೆ.
ಕಂಬಳ ವೀಕ್ಷಣೆಗೆ ಶುಲ್ಕ ಇಲ್ಲ
ಕಂಬಳ ವೀಕ್ಷಣೆಗೆ ಸಾರ್ವಜನಿಕರಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಪಾಸ್ ಇಲ್ಲದೆ ಸುಮಾರು 5 ಸಾವಿರ ಜನರಿಗೆ ಮುಕ್ತವಾಗಿ ನಿಂತು ನೋಡಲು ಪ್ರತ್ಯೇಕ ಬಯಲು ವಲಯ ನಿರ್ಮಿಸಲಾಗಿದೆ. ಗ್ಯಾಲರಿಯಲ್ಲಿ ಒಂದೇ ಬಾರಿಗೆ 15,000 ಜನರು ಕುಳಿತು ವೀಕ್ಷಿಸಲು ಸುಸಜ್ಜಿತ ಆಸನ ವ್ಯವಸ್ಥೆ ಇರಲಿದ್ದು, ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸಲು ದಿನವೊಂದಕ್ಕೆ 3 ಬ್ಯಾಚ್‌ಗಳಲ್ಲಿ ಉಚಿತ ಪಾಸ್ ನೀಡಲಾಗುತ್ತದೆ. ದೇಶ-ವಿದೇಶಗಳ ಪ್ರವಾಸಿಗರು ಸೇರಿದಂತೆ ಒಟ್ಟು 25 ಲಕ್ಷಕ್ಕೂ ಹೆಚ್ಚು ಜನರು ಕಂಬಳ ವೀಕ್ಷಿಸುವ ಸಾಧ್ಯತೆ ಇದೆ.
ಕಂಬಳ ಇತಿಹಾಸ
ಕರಾವಳಿಯ ಕಂಬಳ ಇತಿಹಾಸವು ಸುಮಾರು 800 ವರ್ಷಗಳಷ್ಟು ಹಳೆಯದಾದ ಸಾಂಪ್ರದಾಯಿಕ ಜಾನಪದ ಕ್ರೀಡೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಭಾಗಗಳಲ್ಲಿ ಭತ್ತದ ಸುಗ್ಗಿ ಹಾಗೂ ಬಿತ್ತನೆ ಸಮಯದಲ್ಲಿ ಕೋಣಗಳನ್ನು ಗದ್ದೆಯಲ್ಲಿ ಓಡಿಸುವ ಮೂಲಕ ದೇವರನ್ನು ಒಲಿಸಿಕೊಳ್ಳಲು ಈ ಆಚರಣೆಯನ್ನು ನಡೆಸಿಕೊಂಡು ಬರಲಾಗಿದೆ.
ಕಂಬಳ ಪದವು ಜೌಗು ಗದ್ದೆ ಪದದಿಂದ ಬಂದಿದೆ ಎಂದು ನಂಬಲಾಗಿದೆ.ಇದು ಕರಾವಳಿಯ ಕೃಷಿ ಸಂಸ್ಕೃತಿ ಹಾಗೂ ನಾಥ ಪಂಥದ ಧಾರ್ಮಿಕ ನಂಬಿಕೆಗಳೊಂದಿಗೆ ಆಳವಾಗಿ ಬೆಸೆದುಕೊಂಡಿದೆ. ಹಿಂದೆ ರಾಜ ಮಹಾರಾಜರು ಹಾಗೂ ಅರಸರು ಕಂಬಳವನ್ನು ಪ್ರೋತ್ಸಾಹಿಸುತ್ತಿದ್ದರು. ಧಾರ್ಮಿಕ ಮಹತ್ವಇದು ಕೇವಲ ಮನರಂಜನೆಯಲ್ಲ, ಬದಲಾಗಿ ದೇವರ ಪ್ರಸಾದ ಮತ್ತು ಹಬ್ಬದ ಆಚರಣೆಯಾಗಿದೆ. ಒಡೆಯರು ತಮ್ಮ ಕೋಣಗಳನ್ನು ಆರೋಗ್ಯವಾಗಿಟ್ಟು, ಒಡ್ಡುಗಳಲ್ಲಿ ಓಡಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಇಂದಿನ ದಿನಗಳಲ್ಲಿ ಕಂಬಳವು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಜನಪ್ರಿಯ ಸ್ಪರ್ಧೆಯಾಗಿ ರೂಪುಗೊಂಡಿದೆ.
ಸಂಸ್ಕೃತಿಯ ಎರವಲು
ಸಂಸ್ಕೃತಿ ಎರವಲು ಎಂದರೆ ಒಂದು ಸಮಾಜ ಅಥವಾ ಜನಸಮುದಾಯವು ಮತ್ತೊಂದು ಸಂಸ್ಕೃತಿಯ ಆಚಾರ-ವಿಚಾರ, ಭಾಷೆ, ಉಡುಪು, ಆಹಾರ ಪದ್ಧತಿ, ಕಲೆ ಅಳವಡಿಸಿಕೊಳ್ಳುವ ಅಥವಾ ನಕಲು ಮಾಡುವ ಪ್ರಕ್ರಿಯೆಯಾಗಿದೆ. ಮಾನವ ಇತಿಹಾಸದ ಬೆಳವಣಿಗೆಯಲ್ಲಿ ಸಂಸ್ಕೃತಿ ಎರವಲು ಪ್ರಮುಖ ಪಾತ್ರ ವಹಿಸಿದೆ.
ಕರಾವಳಿ ಕರ್ನಾಟಕದ ಮಣ್ಣಿನೊಂದಿಗೆ ಬೆಸೆದುಕೊಂಡಿರುವ ಕಂಬಳ ಕೇವಲ ಕೋಣಗಳ ಓಟವಲ್ಲ; ಅದು ಕೃಷಿ ಬದುಕು, ಜಾನಪದ ಸಂಪ್ರದಾಯ ಮತ್ತು ಗ್ರಾಮೀಣ ಸಮುದಾಯದ ಒಗ್ಗಟ್ಟಿನ ಪ್ರತೀಕ. ಆದರೆ ಇಂದು ಕಂಬಳದಂತಹ ಕರಾವಳಿಯ ವಿಶಿಷ್ಟ ಸಂಸ್ಕೃತಿಯ ಅಂಶಗಳು ರಾಜ್ಯದ ಇತರ ಭಾಗಗಳ ಉತ್ಸವಗಳಲ್ಲೂ ಕಾಣಿಸಿಕೊಳ್ಳುತ್ತಿರುವುದು ‘ಸಾಂಸ್ಕೃತಿಕ ಎರವಲು’ ಎಂಬ ಚರ್ಚೆಗೆ ಕಾರಣವಾಗಿದೆ.
ಒಂದು ಪ್ರದೇಶದ ಸಂಪ್ರದಾಯ ಮತ್ತೊಂದು ಪ್ರದೇಶದಲ್ಲಿ ಪರಿಚಯವಾಗುವುದು ಸಂಸ್ಕೃತಿಗಳ ನಡುವಿನ ಸಂಪರ್ಕವನ್ನು ಹೆಚ್ಚಿಸಬಹುದು; ಆದರೆ ಅದರ ಮೂಲ, ಹಿನ್ನೆಲೆ ಮತ್ತು ಸ್ಥಳೀಯ ಸಮುದಾಯದ ಕೊಡುಗೆಯನ್ನು ಗೌರವಿಸುವುದು ಅಷ್ಟೇ ಮುಖ್ಯವಾಗಿದೆ.

