ನವದೆಹಲಿ: ಇವಿಎಂ (EVM) ಮತ್ತು ಮತದಾರರ ಪಟ್ಟಿಗಳ ಮೂಲಕ ಬಿಜೆಪಿ (BJP) ಚುನಾವಣಾ ಅಕ್ರಮಗಳಲ್ಲಿ ತೊಡಗಿದೆ. ಈ ವಿಷಯವಾಗಿ ನಾವು ಬೀದಿಗಿಳಿದು ಪ್ರತಿಭಟನೆ ನಡೆಸಬೇಕು ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ( Rahul Gandhi) ಕರೆ ನೀಡಿದ್ದಾರೆ.
ನವದೆಹಲಿಯ ಇಂದಿರಾ ಭವನದಲ್ಲಿ ನಡೆದ CWC ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ, ನಾನು ಕಳೆದ ಎರಡು ವರ್ಷಗಳಿಂದ ಚುನಾವಣಾ ಅಕ್ರಮದ ಬಗ್ಗೆ ಪ್ರಸ್ತಾಪಿಸುತ್ತಿದ್ದೇನೆ. ಆದರೆ ನಾನು ಹೇಳುತ್ತಿರುವುದು ಸರಿ ಎಂದು ಅನೇಕರು ನಂಬಿರಲಿಲ್ಲ. ಈಗ ಎರಡು ವರ್ಷಗಳಲ್ಲಿ ಆ ಪರಿಸ್ಥಿತಿ ಬದಲಾಗಿದೆ. ಏಕೆಂದರೆ ವಾಸ್ತವಾಂಶಗಳ ಆಧಾರದ ಮೇಲೆ ನನ್ನ ವಾದ ಮಂಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನೀವು ಮಾಡಿರೋದು ದೇಶದ್ರೋಹ; ಟೈಂ ಬರುತ್ತೆ, ನಿಮ್ಮನ್ನ ಹಿಡಿಯುತ್ತೇವೆ – ರಾಹುಲ್ ಗಾಂಧಿ ಎಚ್ಚರಿಕೆ
2024ರ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ (NDA) ಗೆದ್ದಿರುವ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ ಅವರು, ಚುನಾವಣೆ ‘ಮ್ಯಾಚ್-ಫಿಕ್ಸಿಂಗ್’ (ಹೊಂದಾಣಿಕೆ) ಆಗಿದ್ದರೆ, ಪ್ರಧಾನ ಮಂತ್ರಿಗಳು ಅಕ್ರಮವಾಗಿ ಅಧಿಕಾರದಲ್ಲಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಎಲೆಕ್ಟ್ರಾನಿಕ್ ಮತಯಂತ್ರಗಳು ಮತ್ತು ಮತದಾರರ ಪಟ್ಟಿ ತಿರುಚುವ ಮೂಲಕ ಚುನಾವಣಾ ಫಲಿತಾಂಶವನ್ನು ಮೊದಲೇ ನಿರ್ಧರಿಸುವ (ಮ್ಯಾಚ್-ಫಿಕ್ಸಿಂಗ್) ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಗಂಭೀರ ಆರೋಪಗಳನ್ನು ಮುಂದಿಟ್ಟಿರುವ ಕಾಂಗ್ರೆಸ್ (Congress) ಕಾರ್ಯಕಾರಿ ಸಮಿತಿ ಮುಖ್ಯ ಚುನಾವಣಾ ಆಯುಕ್ತರ ತಕ್ಷಣದ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ. SIR ಪ್ರಕ್ರಿಯೆಯ ತಕ್ಷಣದ ಸ್ಥಗಿತಗೊಳಿಸಬೇಕು ಮತ್ತು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿರುವ 13.30 ಕೋಟಿ ಹೆಸರುಗಳ ಮರುಸ್ಥಾಪಿಸಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ. ಇದನ್ನೂ ಓದಿ: ಜ್ಞಾನೇಶ್ ಕುಮಾರ್ ಅಮಾನತು ಕೋರಿ ಅರ್ಜಿ- ವಿಚಾರಣೆಗೆ ಸುಪ್ರೀಂ ಸಮ್ಮತಿ
CWCಯ ಪ್ರಮುಖ ನಿರ್ಣಯಗಳು
ಮುಖ್ಯ ಚುನಾವಣಾ ಆಯುಕ್ತರ ತಕ್ಷಣದ ರಾಜೀನಾಮೆ ನೀಡಬೇಕು
SIR ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು
ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎನ್ನಲಾಗಿರುವ 13.30 ಕೋಟಿ ಹೆಸರುಗಳನ್ನು ಮರುಸ್ಥಾಪಿಸಬೇಕು
ಚುನಾವಣಾ ಆಯೋಗವನ್ನು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿ ಮರುಸ್ಥಾಪಿಸಬೇಕು
ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಕಾಂಗ್ರೆಸ್ ಆಗ್ರಹಿಸಿದೆ.

