– ಪ್ರಕರಣದ ಸುತ್ತ ಹಲವು ಅನುಮಾನ
ಹಾಸನ: ಸೆ.20 ರಂದು ಚನ್ನರಾಯಪಟ್ಟಣದ (Channarayapatna) ಚಿಕ್ಕನಾಯಕನಹಳ್ಳಿ ಬಳಿ ಹೇಮಾವತಿ ನಾಲೆಗೆ (Hemavathi Canal) ಜಿಗಿದಿದ್ದಾಳೆ ಎನ್ನಲಾದ ನವವಿವಾಹಿತೆಯ ಸುಳಿವು ಇನ್ನೂ ಪತ್ತೆಯಾಗಿಲ್ಲ. ಪ್ರಕರಣ ನಡೆದು 11 ದಿನಗಳಾದ್ರೂ ಶವ ಪತ್ತೆಯಾಗದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪ್ರಿಯಾಂಕ (ಜಯಶೀಲಾ.ಬಿ.ಎನ್) ನಿಗೂಢವಾಗಿ ನಾಪತ್ತೆಯಾಗಿ ಇಂದಿಗೆ ಹನ್ನೊಂದು ದಿನ ಕಳೆದಿದೆ. ಹೇಮಾವತಿ ನಾಲೆಯಲ್ಲಿ ಪ್ರತಿನಿತ್ಯ ಗ್ರಾಮಸ್ಥರು ಹಾಗೂ ಕುಟುಂಬದ ಸದಸ್ಯರು ಹುಡುಕಾಟ ನಡೆಸುತ್ತಿದ್ದಾರೆ. ಚನ್ನರಾಯಪಟ್ಟಣದಿಂದ ತುಮಕೂರಿನವರೆಗೆ ಹೇಮಾವತಿ ನಾಲೆಯಲ್ಲಿ ಸಂಪೂರ್ಣ ಶೋಧಕಾರ್ಯ ನಡೆಸಲಾಗಿದೆ. ಐದು ಟ್ರ್ಯಾಕ್ಟರ್ಗಳ ಮೂಲಕ ಸುಮಾರು ಇಪ್ಪತ್ತೈದು ಮಂದಿ ಬಾಗೂರು-ನವಿಲೆ ಸುರಂಗದಲ್ಲಿರಯೂ ಮಹಿಳೆಯ ಮೃತದೇಹಕ್ಕಾಗಿ ಹುಡುಕಾಟ ನಡೆಸಿದರು ಪತ್ತೆಯಾಗಿಲ್ಲ. ಇದನ್ನೂ ಓದಿ: ನಾಲೆಯಲ್ಲಿ ನವವಿವಾಹಿತೆ ಕಣ್ಮರೆ – ಪತಿ ವಿರುದ್ಧ ಕೊಲೆ ಆರೋಪ
ಸೆ.21 ರಿಂದ ನೀರು ಹರಿಯುತ್ತಿರುವ ನಾಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಇದೀಗ ಹೇಮಾವತಿ ನಾಲೆಯಲ್ಲಿ ನೀರು ನಿಲ್ಲಿಸಿದ್ದು ಎಷ್ಟೇ ಹುಡುಕಾಟ ನಡೆಸಿದರು ಮೃತದೇಹ ಪತ್ತೆಯಾಗಿಲ್ಲ. ಈ ಕಡೆ ಮಹಿಳೆಯ ಪತಿ ರಾಜೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಿಳೆ (Woman) ನಿಗೂಢ ಕಣ್ಮರೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು, ಆಕೆ ಬದುಕ್ಕಿದ್ದಾಳೋ ಅಥವಾ ಮೃತಪಟ್ಟಿದ್ದಾಳೋ ಎಂಬ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ನಾಲೆಗೆ ತಳ್ಳಿ ಹತ್ಯೆ ಆರೋಪ
ಎರಡುವರೆ ತಿಂಗಳ ಗರ್ಭಿಣಿಯಾಗಿದ್ದ ಜಯಶೀಲಾಳನ್ನು ಪತಿ ರಾಜಶೇಖರ ಸೆ.19 ರಂದು ಬೈಕ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ತಂದೆ ದೊರೆಸ್ವಾಮಿಗೆ ಕರೆ ಮಾಡಿ ಆಸ್ಪತ್ರೆಗೆ ಬರುವಂತೆ ಜಯಶೀಲಾ ಹೇಳಿದ್ದಳು. ತಂದೆಗೆ ಫೋನ್ ಮಾಡಿದ್ದಕ್ಕೆ ಜಯಶೀಲಾ ಜೊತೆ ಪತಿ ಹಾಗೂ ಅತ್ತೆ ವಿಜಯಲಕ್ಷ್ಮಿ ಜಗಳ ಮಾಡಿದ್ದರು. ಇದರಿಂದ ತಂದೆಗೆ ಕರೆ ಮಾಡಿ ಆಸ್ಪತ್ರೆಗೆ ಬರಬೇಡಿ ಎಂದಿದ್ದಳು.
ಆಸ್ಪತ್ರೆಗೆ ತೋರಿಸಿ ಚಿಕ್ಕನಾಯಕನಹಳ್ಳಿ ಗ್ರಾಮದ ಹೇಮಾವತಿ ಎಡದಂಡೆ ನಾಲೆ ಬಳಿ ಬರುವಾಗ ಬೈಕ್ ನಿಲ್ಲಿಸುವಂತೆ ಹೇಳಿ ಪತ್ನಿ ನೀರಿಗೆ ಜಿಗಿದಿದ್ದಾಳೆ ಎಂದು ರಾಜಶೇಖರ ಹೇಳಿದ್ದಾನೆ. ಅಲ್ಲದೇ ತಾನೂ ಕಾಪಾಡಲು ನೀರಿಗೆ ಜಿಗಿದಿದ್ದೆ, ಆದರೆ ಸಾಧ್ಯವಾಗಿಲ್ಲ. ವರದಕ್ಷಿಣೆಗಾಗಿ ನಾನಾಗಲಿ ನಮ್ಮ ಮನೆಯವರಾಗಲಿ ಕಿರುಕುಳ ನೀಡಿಲ್ಲ ಎಂದು ಹೇಳಿಕೊಂಡಿದ್ದಾನೆ.
ಪತಿ ಕುಟುಂಬಸ್ಥರ ಆರೋಪವೇನು?
ಜಯಶೀಲಾಗೆ ಈಗಾಗಲೇ ಪ್ರೇಮಿಯ ಜೊತೆ ಮದುವೆಯಾಗಿತ್ತು. ಆಕೆಯನ್ನು ಅವಳ ತಂದೆ ತಾಯಿ ವಾಪಸ್ ಕರೆತಂದು ವಿಷದ ಬಾಟಲ್ ಹಿಡಿದು ಬೆದರಿಸಿ, ರಾಜಶೇಖರನನ್ನು ಮದುವೆಯಾಗುವಂತೆ ಒತ್ತಡ ಹೇರಿದ್ದರು. ಈ ವಿಚಾರ ಮುಚ್ಚಿಟ್ಟು ಮದುವೆ ಮಾಡಿದ್ದರು. ಅವರು ಮಾಡಿದ ತಪ್ಪಿಗೆ ನಮ್ಮ ಹುಡುಗನ ಜೀವನ ಹಾಳಾಗಿದೆ ಎಂದು ರಾಜಶೇಖರನ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ನವವಿವಾಹಿತೆ ನಿಗೂಢ ಕಣ್ಮರೆ – ನಾಲ್ಕನೇ ದಿನ ಮುಂದುವರಿದ ಶೋಧ

