– ಬೆಂಗಳೂರು ಏರ್ಪೋರ್ಟ್ನಲ್ಲಿ ಹೆಡೆಮುರಿ ಕಟ್ಟಿದ ಎಸ್ಐಟಿ
ಬೆಂಗಳೂರು: ನಕಲಿ ಔಷಧ ತಯಾರಿಕೆ ಮತ್ತು ಮಾರಾಟ ಜಾಲ ಪ್ರಕರಣದ ಕಿಂಗ್ಪಿನ್ ಪ್ರಶಾಂತ್ನನ್ನ ವಿಶೇಷ ತನಿಖಾಧಿಕಾರಿಗಳ ತಂಡ (SIT) ಬಂಧಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಶಾಂತ್ನನ್ನ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಕುರಿತ ಎಕ್ಸ್ಕ್ಲೂಸಿವ್ ವಿಡಿಯೋ ʻಪಬ್ಲಿಕ್ಟಿವಿʼಗೆ ಲಭ್ಯವಾಗಿದೆ.

ಪ್ರಶಾಂತ್ ವಿರುದ್ಧ ಈಗಾಗಲೇ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಪ್ರಕರಣ ಬೆಳಕಿಗೆ ಬಂದ ಬಳಿಕ ಆತ ಅಜರ್ಬೈಜಾನ್ನಲ್ಲಿ ತಲೆಮರೆಸಿಕೊಂಡಿದ್ದ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿದ್ದವು. ವಿದೇಶದಿಂದ ವಾಪಸ್ ಬಂದ ಸಂದರ್ಭದಲ್ಲಿ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಎಸ್ಐಟಿ ಅಧಿಕಾರಿಗಳು ಆತನನ್ನ ಬಂಧಿಸಿದ್ದಾರೆ.
ನಕಲಿ ಔಷಧಿ ಪ್ರಕರಣದಲ್ಲಿ ಆರೋಪಿ ವೀರೇಶ್ ಜೈನ್ ನೀಡಿರುವ ಹೇಳಿಕೆಯ ಆಧಾರದ ಮೇಲೆ ಪ್ರಶಾಂತ್ನನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಸದ್ಯ ಆರೋಪಿ ಪ್ರಶಾಂತ್ಗೆ ವೈದ್ಯಕೀಯ ತಪಾಸಣೆ ಮಾಡಿಸಿ ಕಮಿಷನರ್ ಕಚೇರಿಗೆ ಎಸ್ಐಟಿ ಅಧಿಕಾರಿಗಳು ಕರೆತಂದಿದ್ದಾರೆ. ಪ್ರಾಥಮಿಕ ಹೇಳಿಕೆ ದಾಖಲಿಸಿಕೊಂಡ ಬಳಿಕ ಇಂದು ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

