– ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಪ್ರಯತ್ನ ಆಘಾತಕಾರಿ
ಲಕ್ನೋ: ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ದೇಶದ ಸಾಂವಿಧಾನಿಕ ಸಂಸ್ಥೆಗಳನ್ನ ದುರ್ಬಲಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಪ್ರಜಾಪ್ರಭುತ್ವಕ್ಕೆ ಹಾನಿ ಉಂಟುಮಾಡುವ ಪ್ರತಿಯೊಂದು ಸಂಚಿನಲ್ಲೂ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಭಾಗಿಯಾಗಿವೆ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಕಿಡಿ ಕಾರಿದರು.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ವಿವಾದ ಮುಂದುವರಿದಿರುವ ಬೆನ್ನಲ್ಲೇ, ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಕಾಂಗ್ರೆಸ್ (Congress) ಹಾಗೂ ಇತರ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
लखनऊ में आयोजित प्रेस वार्ता…https://t.co/OttpZQFdrp
— Yogi Adityanath (@myogiadityanath) September 27, 2026
ಪ್ರಜಾಪ್ರಭುತ್ವಕ್ಕೆ ಹಾನಿ ಮಾಡುವ ಉದ್ದೇಶದ ಪ್ರತಿಯೊಂದು ಸಂಚಿನಲ್ಲೂ ಅವರು ಭಾಗಿಯಾಗಿದ್ದಾರೆ. ದೇಶದ ಪ್ರಮುಖ ಪ್ರತಿಪಕ್ಷ ಹಾಗೂ ಅದರ ಯುಪಿಎ ಮಿತ್ರಪಕ್ಷಗಳ ಪ್ರಸ್ತುತ ನಡೆ ಮತ್ತು ಹೇಳಿಕೆಗಳು ಬೇಜವಾಬ್ದಾರಿಯುತವಾಗಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹಾನಿಕಾರಕವಾಗಿವೆ ಎಂದು ಆಕ್ಷೇಪಿಸಿದರು.
ಕಾರಣವಿಲ್ಲದೆ ವಿಪಕ್ಷಗಳು ಗೊಂದಲ ಸೃಷ್ಟಿ
SIR ಪ್ರಕ್ರಿಯೆ ಕುರಿತ ಗೊಂದಲ ಅನಗತ್ಯವಾಗಿದೆ. ದೇಶದಲ್ಲಿ ಈ ಹಿಂದೆ ಹಲವು ಸಂದರ್ಭಗಳಲ್ಲಿ SIR ಪ್ರಕ್ರಿಯೆ ನಡೆಸಲಾಗಿದೆ. 1952, 1957, 1961, 1965-66 ಹಾಗೂ 2003ರಲ್ಲಿ SIR ಕಾರ್ಯಾಚರಣೆ ನಡೆದಿದ್ದು, ಇವುಗಳಲ್ಲಿ ಬಹುತೇಕ ಸಂದರ್ಭಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಅಧಿಕಾರದಲ್ಲಿದ್ದವು. ಆದ್ರೆ ಇದನ್ನು ನಿರ್ಲಕ್ಷಿಸಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ರು.
ಎಸ್‌ಐಆರ್ ಪ್ರಕ್ರಿಯೆ ಕುರಿತು ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್‌ಜೆಡಿ ಸೇರಿದಂತೆ ಇತರ ಪಕ್ಷಗಳು ನಡೆಸುತ್ತಿರುವ ಗದ್ದಲ ಅತ್ಯಂತ ದುರದೃಷ್ಟಕರ. ವಿಪಕ್ಷಗಳು ತಮ್ಮ ಭ್ರಷ್ಟ ಕಾರ್ಯವೈಖರಿ ಮತ್ತು ಆರ್ಥಿಕ ಅಕ್ರಮಗಳಿಂದಾಗಿ ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆ ವಿಚಾರದಲ್ಲಿ ಹಲವು ಬಾರಿ ರಾಜಿ ಮಾಡಿಕೊಂಡಿವೆ ಎಂದು ವಾಗ್ದಾಳಿ ನಡೆಸಿದರು.
ಬಾಲಾಕೋಟ್ ವಾಯುದಾಳಿ ಹಾಗೂ ಭಾರತೀಯ ಸೇನೆಯ ಶೌರ್ಯವನ್ನು ಪ್ರಶ್ನಿಸುವುದು, ಆಪರೇಷನ್ ಸಿಂಧೂರ ದಲ್ಲಿ ಭಾರತೀಯ ಸೈನಿಕರು ಪ್ರದರ್ಶಿಸಿದ ಧೈರ್ಯ ಮತ್ತು ಸಾಹಸದ ಬಗ್ಗೆ ದುರುದ್ದೇಶಪೂರ್ವಕವಾಗಿ ಅನುಮಾನ ಮೂಡಿಸುವ ಪ್ರಯತ್ನ ಮಾಡುವುದು, ಇದು ಯಾವ ರೀತಿಯ ದೇಶಭಕ್ತಿ? ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಈಗಲೂ ಇದೇ ರೀತಿಯ ಬೇಜವಾಬ್ದಾರಿಯುತ ನಡೆಗಳನ್ನ ಮುಂದುವರಿಸುತ್ತಿವೆ ಎಂದರು.

ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಪ್ರಯತ್ನ ಆಘಾತಕಾರಿ
SIR ಕುರಿತು ಚುನಾವಣಾ ಆಯೋಗದ ಮೂವರು ಚುನಾವಣಾ ಆಯುಕ್ತರೂ ಮಾಧ್ಯಮಗಳ ಮುಂದೆ ಬಂದು ಪರಿಸ್ಥಿತಿಯನ್ನು ಸ್ಪಷ್ಟಪಡಿಸಿದ್ದಾರೆ. ಮತದಾರರ ಪಟ್ಟಿಗೆ ಸಂಬಂಧಿಸಿದ ನಿರ್ದೇಶನಗಳನ್ನ ಈಗಾಗಲೇ ನೀಡಲಾಗಿದೆ. ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಯಾವುದೇ ಮತದಾರರು ಫಾರ್ಮ್‌ಗಳನ್ನ ಭರ್ತಿ ಮಾಡಲು ಸಂಪೂರ್ಣ ಅವಕಾಶ ಹೊಂದಿದ್ದಾರೆ. ಈ ಎಲ್ಲಾ ಸ್ಪಷ್ಟೀಕರಣಗಳ ಬಳಿಕವೂ ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾ ಆಯುಕ್ತರನ್ನ ಟೀಕಿಸುತ್ತಿರುವುದು, ಸಾಂವಿಧಾನಿಕ ಸಂಸ್ಥೆಗಳನ್ನ ನಿರಂತರವಾಗಿ ಪ್ರಶ್ನಿಸುವ ಪ್ರಯತ್ನಗಳು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತರುವ ಹಾಗೂ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನ ದುರ್ಬಲಗೊಳಿಸುವ ಉದ್ದೇಶ ಹೊಂದಿವೆ ಎಂದು ಆರೋಪಿಸಿದರು.

