ನಗೋಯಾ: ಏಷ್ಯನ್ ಗೇಮ್ಸ್ 2026ರ (Asian Games 2026) ಪುರುಷರ ಕಬಡ್ಡಿ (Men’s Kabaddi) ಫೈನಲ್ನಲ್ಲಿ ಭಾರತ (India) ತಂಡ ಇರಾನ್ (Iran) ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ದ್ವಿತೀಯಾರ್ಧದಲ್ಲಿ ಅದ್ಭುತ ಕಂಬ್ಯಾಕ್ ಮಾಡಿದ ಭಾರತ 40-34 ಅಂಕಗಳ ಅಂತರದಲ್ಲಿ ಇರಾನ್ ತಂಡವನ್ನು ಮಣಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಈ ಮೂಲಕ ಹಿಂದಿನ ಆವೃತ್ತಿಯಲ್ಲಿ ಗೆದ್ದಿದ್ದ ಚಿನ್ನದ ಪದಕವನ್ನು ಭಾರತ ಯಶಸ್ವಿಯಾಗಿ ಉಳಿಸಿಕೊಂಡಿದೆ.
ಈ ಗೆಲುವಿನೊಂದಿಗೆ ಪುರುಷರ ಕಬಡ್ಡಿಯಲ್ಲಿ ಭಾರತ ಸತತ ಎರಡನೇ ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದಂತಾಗಿದೆ. ಇದೇ ದಿನ ಮಹಿಳೆಯರ ಕಬಡ್ಡಿ ತಂಡವೂ ಇರಾನ್ ವಿರುದ್ಧ ಗೆದ್ದು ಚಿನ್ನದ ಪದಕ ಪಡೆದಿದ್ದು, ಕಬಡ್ಡಿಯಲ್ಲಿ ಭಾರತಕ್ಕೆ ಐತಿಹಾಸಿಕ ಸಾಧನೆಯಾಗಿದೆ.
ಫೈನಲ್ ಪಂದ್ಯ ಆರಂಭದಿಂದಲೇ ರೋಚಕವಾಗಿತ್ತು. ಮೊದಲಾರ್ಧದಲ್ಲಿ ಭಾರತ ಮತ್ತು ಇರಾನ್ ತಂಡಗಳು ಸಮಬಲದ ಹೋರಾಟ ನಡೆಸಿದವು. ಎರಡೂ ತಂಡಗಳು ಅಂಕಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದು, ಯಾವುದೇ ತಂಡಕ್ಕೂ ಆರಂಭದಲ್ಲಿ ಸ್ಪಷ್ಟ ಮುನ್ನಡೆ ಸಿಗಲಿಲ್ಲ.
ಇರಾನ್ ತಂಡ ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿ ಭಾರತದ ಮೇಲೆ ಒತ್ತಡ ಹೇರಿತು. ಆದರೆ ಭಾರತ ನಿರ್ಣಾಯಕ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ನೀಡಿತು. ಸೂಪರ್ ಟ್ಯಾಕಲ್ ಮೂಲಕ ಭಾರತ ಕೆಲಕಾಲ ಮುನ್ನಡೆ ಸಾಧಿಸಿತು. ಆದರೆ ಇರಾನ್ ಮತ್ತೆ ತಿರುಗೇಟು ನೀಡಿ ಭಾರತವನ್ನು ಆಲ್ಔಟ್ ಮಾಡಿತು. ಇದರಿಂದ ಇರಾನ್ಗೆ ನಾಲ್ಕು ಅಂಕಗಳು ಲಭಿಸಿ 14-13ರ ಮುನ್ನಡೆ ಸಿಕ್ಕಿತು.
ಭಾರತ ಮತ್ತೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರೂ ಇರಾನ್ ತನ್ನ ವೇಗವನ್ನು ಮುಂದುವರಿಸಿತು. ಪರಿಣಾಮ ಮೊದಲಾರ್ಧ ಮುಕ್ತಾಯದ ವೇಳೆಗೆ ಇರಾನ್ 18-17 ಅಂಕಗಳಿಂದ ಅಲ್ಪ ಮುನ್ನಡೆ ಕಾಯ್ದುಕೊಂಡಿತ್ತು. ದ್ವಿತೀಯಾರ್ಧ ಆರಂಭವಾಗುತ್ತಿದ್ದಂತೆ ಭಾರತದ ಆಟ ಸಂಪೂರ್ಣ ಬದಲಾಗಿತ್ತು. ಹೆಚ್ಚು ಆಕ್ರಮಣಕಾರಿ ಆಟಕ್ಕೆ ಮುಂದಾದ ಹಾಲಿ ಚಾಂಪಿಯನ್ ಭಾರತ, ಇರಾನ್ ತಂಡವನ್ನು ಆಲ್ಔಟ್ ಮಾಡಿ ಮುನ್ನಡೆ ಸಾಧಿಸಿತು. ಇದರೊಂದಿಗೆ ಪಂದ್ಯದ ವೇಗವೂ ಭಾರತದ ಪರವಾಗಿ ಬದಲಾಯಿತು.
ಪಂದ್ಯ ಮುಗಿಯಲು 10 ನಿಮಿಷಗಳು ಬಾಕಿ ಇರುವಾಗ ಭಾರತ ಐದು ಅಂಕಗಳ ಮುನ್ನಡೆ ಗಳಿಸಿತ್ತು. ದಾಳಿ ಮತ್ತು ರಕ್ಷಣೆಯಲ್ಲಿ ಭಾರತೀಯ ಆಟಗಾರರು ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಮುನ್ನಡೆಯನ್ನು ವಿಸ್ತರಿಸಿದರು. ಪಂದ್ಯದ ನಿರ್ಣಾಯಕ ಹಂತದಲ್ಲಿ ಅಸ್ಲಂ ಅವರ ಅದ್ಭುತ ರೈಡ್ ಭಾರತಕ್ಕೆ ಪ್ರಮುಖ ಅಂಕಗಳನ್ನು ತಂದುಕೊಟ್ಟಿತು. ಇರಾನ್ ಆಟಗಾರರು ಅವರನ್ನು ಸುತ್ತುವರಿದಿದ್ದರೂ, ಚಾಣಾಕ್ಷತೆಯಿಂದ ವಾಕ್ ಲೈನ್ ದಾಟಿದ ಅಸ್ಲಂ ನಿರ್ಣಾಯಕ ಅಂಕಗಳನ್ನು ಗಳಿಸಿದರು. ಇದರಿಂದ ಭಾರತದ ಮುನ್ನಡೆ 9 ಅಂಕಗಳಿಗೆ ವಿಸ್ತರಿಸಿತು.
ಕೊನೆಯ ನಿಮಿಷಗಳಲ್ಲಿ ಇರಾನ್ ಹಲವು ಬಾರಿ ತಿರುಗೇಟು ನೀಡಲು ಪ್ರಯತ್ನಿಸಿತು. ಆದರೆ ಭಾರತದ ಆಟಗಾರರು ಪ್ರತಿ ದಾಳಿಗೂ ಪರಿಣಾಮಕಾರಿ ಉತ್ತರ ನೀಡಿದರು. ರಕ್ಷಣೆಯಲ್ಲಿ ಹಿಡಿತ ಕಾಯ್ದುಕೊಂಡ ಭಾರತ, ಅಂತಿಮ ಸೀಟಿಯವರೆಗೂ ಮುನ್ನಡೆಯನ್ನು ಉಳಿಸಿಕೊಂಡಿತು. ಅಂತಿಮವಾಗಿ ಭಾರತ 40-34 ಅಂಕಗಳಿಂದ ಇರಾನ್ ತಂಡವನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತು.

