– ಹತ್ತಾರು ರೈತರಿಂದ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ
– ಪ್ರತಿಭಟನಾ ಸ್ಥಳಕ್ಕೆ ಡಿಸಿ ಬರುವಂತೆ ಬಿಗಿ ಪಟ್ಟು
ರಾಮನಗರ: ಬಿಡದಿ ಟೌನ್ ಶಿಪ್ (Bidadi Township) ಜಟಾಪಟಿ ಮುಂದುವರೆದಿದ್ದು, ನಿನ್ನೆ ಸಂಜೆ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡ್ತಿದ್ದ ರೈತರ ಬಂಧನ ಹಿನ್ನಲೆ, ಚನ್ನಪಟ್ಟಣದ ಪೊಲೀಸ್ ಭವನದಲ್ಲಿ ರೈತರನ್ನ ಇರಿಸಲಾಗಿತ್ತು. ಇದೀಗ ಬಂಧನದ ಬಳಿಕವೂ ರೈತರ ಉಪವಾಸ ಸತ್ಯಾಗ್ರಹ ಮುಂದುವರೆದಿದ್ದು, ಸ್ಥಳಕ್ಕೆ ಡಿಸಿ ಬರಬೇಕು ಎಂದು ರೈತರು (Farmers) ಪಟ್ಟು ಹಿಡಿದಿದ್ದಾರೆ.

ಇತ್ತ ಚನ್ನಪಟ್ಟಣದ ಗಾಂಧಿವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲು ರೈತ ಸಂಘಟನೆಗಳ ಸಿದ್ಧತೆ ನಡೆಸಿದ್ದು, ಈ ಮಧ್ಯೆ ಭೈರಮಂಗಲ ಗ್ರಾಮದಲ್ಲೂ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಇತ್ತ ಪ್ರಾಣ ಹೋದ್ರೂ ಭೂಮಿ ಕೊಡಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹತ್ತಾರು ರೈತರು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದ್ದಾರೆ.
ಇನ್ನೂ ಟೌನ್‌ಶಿಪ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಬಂಧನ ಖಂಡಿಸಿ ಸಂಘಟನೆಗಳಿಂದ ಪ್ರತಿಭಟನೆ ಜೋರಾಗಿದೆ. ಚನ್ನಪಟ್ಟಣದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು-ಮೈಸೂರು ಹಳೇ ಹೆದ್ದಾರಿ ತಡೆದು ಸಿಎಂ ಡಿಕೆಶಿ ಹಾಗೂ ಸಚಿವ ಹೆಚ್.ಸಿ.ಬಾಲಕೃಷ್ಣ ವಿರುದ್ಧ ರೈತರು ಘೋಷಣೆ ಕೂಗಿದ್ದಾರೆ. ಪೊಲೀಸರು ಗೂಂಡಾ ವರ್ತನೆ ತೋರಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ರೈತರು – ಪೊಲೀಸರ ನಡುವೆ ವಾಗ್ವಾದ
ಇನ್ನೂ ರೈತ ಸಂಘಟನೆಗಳಿಂದ ರಸ್ತೆ ತಡೆ ಹಿನ್ನೆಲೆ ಸ್ಥಳಕ್ಕೆ ಚನ್ನಪಟ್ಟಣ ಡಿವೈಎಸ್ಪಿ ಗಿರಿ ಆಗಮಿಸಿ ಪರಿಸ್ಥಿತಿ ಗಮನಿಸಿದ್ದಾರೆ. ಈ ವೇಳೆ ಪ್ರತಿಭಟನಾ ನಿರತ ರಸ್ತೆ ತೆರವು ಮಾಡುವಂತೆ ರೈತರಿಗೆ ತಾಕೀತು ಮಾಡಿದ್ದಾರೆ. ಈ ವೇಳೆ ರೈತ ಮುಖಂಡರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.

