ಬೆಂಗಳೂರು: ನಾಡಿನ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕವಾದ ವಿಶ್ವವಿಖ್ಯಾತ ಮೈಸೂರು ದಸರಾ(Mysuru) ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು(Gavisiddheshwara Swamiji) ಉದ್ಘಾಟಿಸಲಿದ್ದಾರೆ.
ವಿಧಾನಸೌಧದಲ್ಲಿ ಈ ವಿಚಾರವನ್ನು ಅಧಿಕೃತವಾಗಿ ಸಿಎಂ ಡಿಕೆ ಶಿವಕುಮಾರ್(DK Shivakumar) ಪ್ರಕಟಿಸಿದರು. ಅಕ್ಟೋಬರ್ 11 ರಿಂದ ಅಕ್ಟೋಬರ್ 21 ರವರೆಗೆ ಒಟ್ಟು 11 ದಿನಗಳ ಕಾಲ ಅತ್ಯಂತ ವೈಭವದಿಂದ ದಸರಾ ನಡೆಯಲಿದೆ.
ಅ. 11 ಭಾನುವಾರ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಅ. 20 ರಂದು ಸಾಂಪ್ರದಾಯಿಕ ಆಯುಧ ಪೂಜೆ ನಡೆಯಲಿದ್ದು ಅ. 21 ಬುಧವಾರ ವಿಜಯದಶಮಿ ದಿನದಂದು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮತ್ತು ಸಂಜೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದೆ.
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪ್ರಸ್ತುತ ಪೀಠಾಧಿಪತಿಗಳು ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಮಠದ 18ನೇ ಪೀಠಾಧಿಪತಿಗಳಾಗಿದ್ದು, ಸಮಾಜದಲ್ಲಿ ತಮ್ಮ ಅಭೂತಪೂರ್ವ ಸಾಮಾಜಿಕ ಕಳಕಳಿ, ಸರಳತೆ ಮತ್ತು ದಾಸೋಹ ಪರಂಪರೆಯಿಂದಾಗಿ ನಾಡಿನಾದ್ಯಂತ ‘ನಡೆದಾಡುವ ದೇವರು’ ಹಾಗೂ ‘ಜಲಋಷಿ’ ಎಂದೇ ಅತ್ಯಂತ ಗೌರವದಿಂದ ಕರೆಯಲ್ಪಡುತ್ತಾರೆ.
ಡಿಸೆಂಬರ್ 13, 2002 ರಂದು ತಮ್ಮ ಪೂರ್ವಾಧಿಕಾರಿಗಳಾದ ಶ್ರೀ ಶಿವಶಾಂತವೀರ ಸ್ವಾಮಿಗಳ ಆಶೀರ್ವಾದದೊಂದಿಗೆ ಮಠದ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರ ಇವರು ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರವಾಗಿದ್ದ ನೀರಿನ ಅಭಾವವನ್ನು ನೀಗಿಸಲು ಇವರು ‘ಜಲ ದೀಕ್ಷೆ’ ಅಭಿಯಾನದ ಮೂಲಕ ನೂರಾರು ಕೆರೆಗಳ ಹೂಳೆತ್ತುವಿಕೆ ಮತ್ತು ಜಲ ಸಂರಕ್ಷಣಾ ಕ್ರಾಂತಿಯನ್ನು ಮಾಡಿ ಜಲಋಷಿ ಎನಿಸಿಕೊಂಡಿದ್ದಾರೆ.
ಶ್ರೀ ಮಠದಲ್ಲಿ ಅನ್ನ, ಅರಿವು (ಶಿಕ್ಷಣ) ಮತ್ತು ಆಧ್ಯಾತ್ಮದ ತ್ರಿವಿಧ ದಾಸೋಹ ನಿರಂತರವಾಗಿ ಸಾಗುತ್ತಿದ್ದು, ಸಾವಿರಾರು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಶಿಕ್ಷಣ ಸೌಲಭ್ಯ ಒದಗಿಸಲಾಗಿದೆ.
ಇವರ ನೇತೃತ್ವದಲ್ಲಿ ಪ್ರತಿವರ್ಷ ಜನವರಿಯಲ್ಲಿ ನಡೆಯುವ ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ (ಅಜ್ಜನ ಜಾತ್ರೆ) ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ ಮತ್ತು ಇದು ದಕ್ಷಿಣ ಭಾರತದ ಅತಿದೊಡ್ಡ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಮ್ಮಿಲನಗಳಲ್ಲಿ ಒಂದಾಗಿದೆ.

