ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ನವದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ SEMICON India-2026 ಸಮಾವೇಶಕ್ಕೆ ಚಾಲನೆ ನೀಡಿದರು.
ಸೆಪ್ಟೆಂಬರ್ 17ರಿಂದ 19ರವರೆಗೆ ನಡೆಯಲಿರುವ ಸಮಾವೇಶದ ಈ ವರ್ಷದ ಧ್ಯೇಯವಾಕ್ಯ ‘Silicon to Systems: Building the Ecosystem’ (ಸಿಲಿಕಾನ್‌ನಿಂದ ವ್ಯವಸ್ಥೆಗಳವರೆಗೆ: ಪರಿಸರ ವ್ಯವಸ್ಥೆಯ ನಿರ್ಮಾಣ) ಆಗಿದೆ.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕವಾಗಿ ಪ್ರಮುಖ ಉತ್ಪಾದನಾ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಮೋದಿ ಪ್ರಸ್ತಾಪಿಸಿದರು. ಭಾರತವು ಚಿಪ್‌ಗಳ ಬಳಕೆಯ ಪ್ರಮುಖ ಮಾರುಕಟ್ಟೆಯಿಂದ ಚಿಪ್ ವಿನ್ಯಾಸ, ಉತ್ಪಾದನೆ, ಪ್ಯಾಕೇಜಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಸಂಪೂರ್ಣ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯ ಪ್ರಮುಖ ಭಾಗವಾಗುವತ್ತ ಸಾಗುತ್ತಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಪ್ರಧಾನಿ ವಿವಿಧ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ಉದ್ಯಮ ಪ್ರತಿನಿಧಿಗಳು, ಸಂಶೋಧಕರು, ಸ್ಟಾರ್ಟ್‌ಅಪ್‌ಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಮತ್ತು ಯುವ ಪ್ರತಿಭೆಗಳಿಗೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಹೊಸ ಆವಿಷ್ಕಾರಗಳಿಗೆ ಅವಕಾಶ ಕಲ್ಪಿಸುವುದಕ್ಕೂ ಒತ್ತು ನೀಡಲಾಗಿದೆ.
SEMICON India-2026ರಲ್ಲಿ 600ಕ್ಕೂ ಹೆಚ್ಚು ಕಂಪನಿಗಳು, 52 ದೇಶಗಳ ಪ್ರತಿನಿಧಿಗಳು, 150ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸುತ್ತಿದ್ದಾರೆ. ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ನೆದರ್‌ಲ್ಯಾಂಡ್ಸ್, ಸಿಂಗಾಪುರ ಮತ್ತು ಸ್ವೀಡನ್ ಸೇರಿದಂತೆ ಆರು ದೇಶಗಳ ಪೆವಿಲಿಯನ್‌ಗಳು, 12 ರಾಜ್ಯಗಳ ಮಳಿಗೆಗಳು, ಸ್ಟಾರ್ಟ್‌ಅಪ್ ಪೆವಿಲಿಯನ್, ವಿದ್ಯಾರ್ಥಿಗಳ ಹ್ಯಾಕಥಾನ್ ಹಾಗೂ ಕೌಶಲ್ಯಾಭಿವೃದ್ಧಿ ವಿಭಾಗಗಳಿವೆ.
ಸಮಾವೇಶದ ವೇಳೆ ಪಂಜಾಬ್‌ನ ಮೊಹಾಲಿಯ CDIL Semiconductor ATMP ಘಟಕ ಮತ್ತು ಗುಜರಾತ್‌ನ ಪಾಲ್ಸಾನಾದ Suchi Semicon OSAT ಘಟಕದಲ್ಲಿ ವಾಣಿಜ್ಯ ಉತ್ಪಾದನೆ ಆರಂಭಿಸುವುದಕ್ಕೂ ಪ್ರಧಾನಿ ಚಾಲನೆ ನೀಡಿದರು. ಇದನ್ನು ಭಾರತದ ಸೆಮಿಕಂಡಕ್ಟರ್ ಉತ್ಪಾದನಾ ಸಾಮರ್ಥ್ಯ ವಿಸ್ತರಣೆಯ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತವು ನೀತಿ ರೂಪಿಸುವ ಹಂತದಿಂದ ವಾಸ್ತವಿಕ ಕಾರ್ಖಾನೆ ಉತ್ಪಾದನೆಯ ಹಂತಕ್ಕೆ ಪ್ರವೇಶಿಸಿದೆ ಎಂದು ಮೋದಿ ಒತ್ತಿ ಹೇಳಿದರು. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಹೆಚ್ಚಿನ ಹೂಡಿಕೆಯ ಅಗತ್ಯವನ್ನೂ ಅವರು ಪ್ರತಿಪಾದಿಸಿದರು.
ಸೆಪ್ಟೆಂಬರ್ 17ರಿಂದ 19ರವರೆಗೆ ನಡೆಯುವ ಈ ಸಮಾವೇಶದಲ್ಲಿ ಜಾಗತಿಕ ಚಿಪ್ ಉದ್ಯಮ, ಹೂಡಿಕೆದಾರರು, ಸಂಶೋಧಕರು, ನೀತಿ ನಿರೂಪಕರು, ಸ್ಟಾರ್ಟ್‌ಅಪ್‌ಗಳು, ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿ ಭಾರತದ ಸೆಮಿಕಂಡಕ್ಟರ್ ಹಾಗೂ ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯ ವಿಸ್ತರಣೆ ಕುರಿತು ಚರ್ಚಿಸಲಿದ್ದಾರೆ.

