ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪಹಲ್ಗಾಮ್‌ನಲ್ಲಿ ನಡೆದ 26 ನಾಗರಿಕರ ಹತ್ಯಾಕಾಂಡವನ್ನು (Pahalgam Attack) ಬ್ರಿಕ್ಸ್ ನಾಯಕರು (BRICS Summit) ಖಂಡಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಹಾಗೂ ಎಲ್ಲಾ ಬಗೆಯ ಭಯೋತ್ಪಾದನೆಯನ್ನು ಎದುರಿಸಲು ಪ್ರಾದೇಶಿಕ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದ್ದಾರೆ.
ಎಲ್ಲಾ ಭಯೋತ್ಪಾದನಾ ಕೃತ್ಯಗಳು ಅಪರಾಧ ಮತ್ತು ಅಸಮರ್ಥನೀಯವಾದ್ದು. ಅಂತಹ ಕೃತ್ಯವನ್ನು ಯಾರು ಮಾಡಿದ್ದಾರೆ ಎಂಬುದನ್ನು ಲೆಕ್ಕಿಸದೆ ಖಂಡಿಸಬೇಕು ಎಂದರು. ಈ ವಿಚಾರವನ್ನು 140 ಅಂಶಗಳ ಘೋಷಣೆಯಲ್ಲಿ 40 ನೇ ಅಂಶವಾಗಿ ಓದಲಾಯಿತು. ಇದನ್ನೂ ಓದಿ: BRICS Summit | ವರ್ಷಗಳ ಹಿಂದೆಯೆ ಅರ್ಜಿ ಸಲ್ಲಿಸಿದ್ರೂ ಪಾಕಿಸ್ತಾನಕ್ಕೆ ಸಿಗದ ಬ್ರಿಕ್ಸ್ ಸದಸ್ಯತ್ವ
2025ರ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು ಮತ್ತು ಇನ್ನೂ ಅನೇಕರು ಗಾಯಗೊಂಡರು ಎಂದು ಬ್ರಿಕ್ಸ್ ನಾಯಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
BRICS ಘೋಷಣೆಯಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುವ ಯಾವುದೇ ರಾಷ್ಟ್ರದ ಹೆಸರನ್ನು ಸ್ಪಷ್ಟವಾಗಿ ಹೆಸರಿಸಲಾಗಿಲ್ಲ. ಆದರೆ ಭಯೋತ್ಪಾದಕರ ಗಡಿಯಾಚೆಗಿನ ಚಲನೆ, ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಮತ್ತು ಅಡಗು ತಾಣಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರೆ ನೀಡಲಾಗಿದೆ.

ಭಯೋತ್ಪಾದನೆಯನ್ನು ಯಾವುದೇ ಧರ್ಮ, ರಾಷ್ಟ್ರೀಯತೆ, ನಾಗರಿಕತೆ ಅಥವಾ ಜನಾಂಗೀಯ ಗುಂಪಿನೊಂದಿಗೆ ಗುರುತಿಸಬಾರದು ಎಂದು ನಾಯಕರು ಒತ್ತಿ ಹೇಳಿದರು. ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರು ಮತ್ತು ಅವರ ಬೆಂಬಲಿಗರನ್ನು ಸಂಬಂಧಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಹೊಣೆಗಾರರನ್ನಾಗಿ ಮಾಡಬೇಕು ಎಂದು ಪ್ರತಿಪಾದಿಸಿದರು.
ಸದಸ್ಯ ರಾಷ್ಟ್ರಗಳು ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಭಯೋತ್ಪಾದನೆಯನ್ನು ಎದುರಿಸುವಲ್ಲಿ ದ್ವಂದ್ವ ಮಾನದಂಡಗಳನ್ನು ತಿರಸ್ಕರಿಸಬೇಕು. ವಿಶ್ವಸಂಸ್ಥೆ ಘೋಷಿಸಿದ ಎಲ್ಲಾ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಸಂಘಟಿತ ಕ್ರಮಗಳಿಗೆ ಇದೇ ವೇಳೆ ಕರೆ ನೀಡಲಾಯಿತು.
ವಿಶೇಷವಾಗಿ ಯುವ ಪೀಳಿಗೆ ಉಗ್ರವಾದ ಎದುರಿಸುವ ಮಹತ್ವವನ್ನು ನಾವು ಒತ್ತಿಹೇಳುತ್ತೇವೆ. ಇದಕ್ಕೆ ಸಂಬಂಧಿತ ಕ್ರಮಗಳನ್ನು ರಾಷ್ಟ್ರಗಳು ಕೈಗೊಳ್ಳಬೇಕು ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ.
ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭೀಕರ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಸ್ಥಳೀಯ ಪೋನಿ ಆಪರೇಟರ್‌ನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆ ದೇಶವನ್ನು ಬೆಚ್ಚಿಬೀಳಿಸಿತ್ತು. ಈ ದಾಳಿ ದೇಶ ಕಂಡ ಭಯಾನಕ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದೆ.
ಜುಲೈ 2025ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದ ಹಿಂದಿನ ಶೃಂಗಸಭೆಯಲ್ಲೂ ಬ್ರಿಕ್ಸ್ ಸಂಘಟನೆಯು ಪಹಲ್ಗಾಮ್ ದಾಳಿಯನ್ನು ಖಂಡಿಸಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯಲ್ಲೂ ಈ ದಾಳಿಗೆ ಖಂಡನೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಜಾಗತಿಕ ಆಡಳಿತದಲ್ಲಿ ಸುಧಾರಣೆ ಅಗತ್ಯ: ಮೋದಿ

