– ಗುತ್ತಿಗೆದಾರರಿಂದ ಲಂಚ ಸ್ವೀಕಾರ ಸಾಕ್ಷ್ಯ
– ಆಫ್ರಿಕಾದ ಕಾಂಗೋದಲ್ಲಿ ಭಾರಿ ಹಣ ಹೂಡಿಕೆ ಮಾಡಿರೋದು ಬಯಲು
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸತೀಶ್ ಜಾರಕಿಹೊಳಿ ಅವರಿಗೆ ಜಾರಿ ನಿರ್ದೇಶನಾಲಯ ಮತ್ತೊಂದು ಶಾಕ್ ಕೊಟ್ಟಿದೆ. ಜಾರಕಿಹೊಳಿ ಅವರ ಕುಟುಂಬಕ್ಕೆ ಸೇರಿದ 21 ಸ್ಥಳಗಳಲ್ಲಿ ಇಡಿ ಶೋಧಕಾರ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಪ್ರಕಟಣೆ ಮೂಲಕ ಹಂಚಿಕೊಂಡಿದ್ದು, ಲೋಕೋಪಯೋಗಿ ಇಲಾಖೆಯಲ್ಲೂ ಅವ್ಯವಹಾರ ನಡೆದಿರೋದನ್ನ ಪತ್ತೆಹಚ್ಚಿದೆ.
ED, Bengaluru conducted searches at 21 premises linked to Karnataka Public Works Minister Satish Jarkiholi & associates at Bengaluru, Belagavi, Gokak, & Kolkata on 09.09.2026 to 10.09.2026 under FEMA, 1999 & seized unaccounted cash of Rs 3.3 Cr, & foreign currency of Rs 15 Lakh. pic.twitter.com/RfPbuISA4F
— ED (@dir_ed) September 11, 2026
ಕಂಟ್ರ್ಯಾಕ್ಟರ್ಗಳ ಜೊತೆಯಲ್ಲಿ ಅಕ್ರಮ ಮಾಡಿರೋದು ಬೆಳಕಿಗೆ ಬಂದಿದೆ. ಅಕ್ರಮಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನ ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಲೆಕ್ಕಕ್ಕೆ ಸಿಗದ 3.3 ಕೋಟಿ ಹಣ, 15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನೂ ಜಪ್ತಿ ಮಾಡಲಾಗಿದೆ. ಅನಧಿಕೃತ ಮಾರ್ಗದಲ್ಲಿ ವಿದೇಶದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಆಫ್ರಿಕಾದ ಕಾಂಗೋದಲ್ಲಿ ಭಾರಿ ಹಣ ಹೂಡಿಕೆ ಮಾಡಿರೋದು ದಾಖಲೆಗಳಿಂದ ಪತ್ತೆಯಾಗಿದೆ ಎಂದು ಇಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇ.ಡಿ ಪ್ರಕಟಣೆಯಲ್ಲಿ ಏನಿದೆ?
ಜಾರಿ ನಿರ್ದೇಶನಾಲಯ (ED) ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತ ಸಹಚರರಿಗೆ ಸಂಬಂಧಿಸಿದ 21 ಸ್ಥಳಗಳಲ್ಲಿ ಇತ್ತೀಚೆಗೆ ಶೋಧ ಕಾರ್ಯಾಚರಣೆ ನಡೆಸಿದೆ. ಸೆ.9 ಮತ್ತು ಸೆ.10 ರಂದು ಬೆಂಗಳೂರು, ಬೆಳಗಾವಿ, ಗೋಕಾಕ ಮತ್ತು ಕೊಲ್ಕತ್ತಾ ಸೇರಿದಂತೆ 4 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA)ಯಡಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಜಾರಕಿಹೊಳಿ ಕುಟುಂಬದವರು ಬಹಿರಂಗಪಡಿಸದ ವಿದೇಶಿ ಹೂಡಿಕೆಗಳು, ಗಡಿಯಾಚೆಗಿನ ವ್ಯವಹಾರ ಸಂಬಂಧಗಳು ಹಾಗೂ ಶಂಕಿತ ಹಣಕಾಸು ಅಕ್ರಮಗಳ ಕುರಿತು ತನಿಖೆ ನಡೆಸಿ ಮಾಹಿತಿ ಸಂಗ್ರಹಿಸುವ ಉದ್ದೇಶ ಹೊಂದಿತ್ತು.

ಈ ಶೋಧ ಕಾರ್ಯಾಚರಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಹಾಗೂ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಮತ್ತು ಬಾವ ವೈ.ಡಿ ಮಂಜುನಾಥ್ ಅವರ ನಿವಾಸಗಳು ಹಾಗೂ ಸಂಬಂಧಿತ ಸ್ಥಳಗಳನ್ನ ಪರಿಶೀಲಿಸಲಾಯಿತು. ಇದರ ಜೊತೆಗೆ ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಚರರಾದ OSD ಹಾಗೂ ವೈಯಕ್ತಿಕ ಸಹಾಯಕ ಮಲಗೌಡ ಪಾಟೀಲ, ರಾಜು ದರಗಶೆಟ್ಟಿ, ವಿಠ್ಠಲ ಪರಸನ್ನವರ ಮತ್ತು ಡಾ. ಗಿರೀಶ್ ಸೋನವಾಳ್ಕರ್ ಅವರಿಗೆ ಸೇರಿದ ಆಸ್ತಿಗಳ ಮೇಲೂ ಶೋಧ ನಡೆಸಲಾಯಿತು.
ಪಿಡಬ್ಲ್ಯೂಡಿ ಇಲಾಖೆಯಿಂದ ಟೆಂಡರ್ ಪಡೆಯಲು ʻಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೆಟ್ ಲಿಮಿಟೆಡ್ʼ (BVEPL) ಎಂಬ ಖಾಸಗಿ ಕಂಪನಿಯು ಭಾರಿ ಮೊತ್ತದ ಲಂಚ ಪಾವತಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಆ ಕಂಪನಿಯ ಅಧಿಕಾರಿಗಳ ಮನೆ ಮೇಲೂ ಶೋಧ ನಡೆಸಲಾಯಿತು. ಈ ಲಂಚದ ಹಣವನ್ನ ವಿದೇಶಿ ಆಸ್ತಿ ಖರೀದಿಸಲು ಬಳಸಲಾಗಿದೆ ಎಂಬ ಆರೋಪವೂ ಇದೆ. BVEPL ಕಂಪನಿಯ ಮಾಲೀಕರ ಕಚೇರಿ ಮತ್ತು ನಿವಾಸಗಳಲ್ಲಿಯೂ ಶೋಧ ನಡೆಸಲಾಗಿದೆ.

ಜಾರಕಿಹೊಳಿ ಅವರ ಕುಟುಂಬದ ಸದಸ್ಯರಾದ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ಅವರ ಸಹೋದರಿ ಮಹಾದೇವಿ ಮಂಜುನಾಥ್ (YD ಮಂಜುನಾಥ್ ಅವರ ಪತ್ನಿ) ಅವರು ವಿದೇಶದ ಹಲವು ಸಂಸ್ಥೆಗಳಲ್ಲಿ ಷೇರುಪಾಲು ಹೊಂದಿರುವುದು ಪತ್ತೆಯಾಗಿದೆ. ಅವುಗಳಲ್ಲಿ ಕಾಂಗೋದಲ್ಲಿರುವ ಎಲ್ಡೊರಾಡೊ ಮೈನಿಂಗ್ ರಿಸೋರ್ಸಸ್ (Eldorado Mining Resources) ಮತ್ತು ಜಾಂಬಿಯಾದ ನವ ಔರಮ್ ಮೈನಿಂಗ್ ಲಿಮಿಟೆಡ್ (Nava Aurum Mining Ltd) ಸೇರಿದಂತೆ ಹಲವು ಸಂಸ್ಥೆಗಳು ಸೇರಿವೆ. ಸತೀಶ್ ಜಾರಕಿಹೊಳಿ ಅವರು ಚಿನ್ನದ ಗಣಿಗಾರಿಕೆ ನಡೆಸುವ ಕಾಂಗೋದ ಮ್ಯಾಗ್ನಿಟ್ಯೂಡ್ ಸ್ಟಾರ್ SARL (Magnitude Star SARL) ಸಂಸ್ಥೆಯಲ್ಲಿ ಸುಮಾರು 40% ರಷ್ಟು ಪಾಲನ್ನು ಹೊಂದಿರುವುದು ಸಹ ಪತ್ತೆಯಾಗಿದೆ. ಆಫ್ರಿಕಾದಲ್ಲಿ ಗಣಿಗಾರಿಕೆ ಆಸ್ತಿಗಳನ್ನ ಹೊಂದಿರುವ ಇತರ ಹಲವು ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ.
ಗೋಕಾಕ, ಬೆಂಗಳೂರು ಡಾಲರ್ಸ್ ಕಾಲೋನಿ ಹಾಗೂ ಕ್ರೆಸೆಂಟ್ ರಸ್ತೆಯಲ್ಲಿರುವ ಅವರ ಕಚೇರಿ-ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಗೋಕಾಕ ಮತ್ತು ಬೆಳಗಾವಿಯಲ್ಲಿರುವ ಸಂಬಂಧಿತ ಆಸ್ತಿಗಳಲ್ಲಿಯೂ ಶೋಧ ನಡೆಯಿತು. FEMA ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು ಮತ್ತು ಇತರ ವಸ್ತುಗಳನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಲೆಕ್ಕಕ್ಕೆ ಸಿಗದ 3.3 ಕೋಟಿ ಹಣ ಜಪ್ತಿ
ಶೋಧದ ವೇಳೆ ಲೆಕ್ಕಕ್ಕೆ ತೋರಿಸದ 3.3 ಕೋಟಿ ನಗದು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಅಮೆರಿಕನ್ ಡಾಲರ್, ಯೂರೋ ಸೇರಿದಂತೆ ಸುಮಾರು 15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಕಾಂಗೋದಲ್ಲಿರುವ ಒಂದು ಸಂಸ್ಥೆಯಲ್ಲಿ ಭಾರಿ ಮೊತ್ತದ ಹೂಡಿಕೆ ಹಾಗೂ ವೆಚ್ಚಗಳನ್ನ ಅನಧಿಕೃತ ಮಾರ್ಗದ ಮೂಲಕ ನಗದು ರೂಪದಲ್ಲಿ ಮಾಡಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳೂ ಶೋಧದ ವೇಳೆ ಪತ್ತೆಯಾಗಿವೆ.
ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಸಾಕ್ಷ್ಯಗಳೂ ಶೋಧದಲ್ಲಿ ಪತ್ತೆಯಾಗಿವೆ. BVEPL ಸೇರಿದಂತೆ ಗುತ್ತಿಗೆದಾರರಿಂದ ಲಂಚದ ಹಣ ಸಂಗ್ರಹಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ಇತರ ಪ್ರಮುಖ ದಾಖಲೆಗಳನ್ನ ವಿವಿಧ ಪ್ರಭಾವಿ ವ್ಯಕ್ತಿಗಳ ಸಂಸ್ಥೆಗಳು ಮತ್ತು ಖಾತೆಗಳಿಂದ ವಶಪಡಿಸಿಕೊಳ್ಳಲಾಗಿದೆ. ಸತೀಶ್ ಜಾರಕಿಹೊಳಿ ಅವರ ಭಾವ ವೈ.ಡಿ ಮಂಜುನಾಥ್ ನಿಯಂತ್ರಿಸಿ ನಿರ್ವಹಿಸುತ್ತಿರುವ ಸಂಸ್ಥೆಗೆ ಸಂಬಂಧಿಸಿದ ಖಾತೆಗಳಲ್ಲಿಯೂ ಇಂತಹ ಸಾಕ್ಷ್ಯಗಳು ಪತ್ತೆಯಾಗಿವೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

