* 500 ರೂ.ನಿಂದ 3,500 ರೂ.ಗೆ ಹೆಚ್ಚಿದ ಟಿಕೆಟ್ ದರ
ಬೆಂಗಳೂರು: ಗಣೇಶ ಚತುರ್ಥಿ (Ganesh Chaturthi) ಹಬ್ಬಕ್ಕೆ ಊರಿಗೆ ಹೊರಟವರಿಗೆ ಖಾಸಗಿ ಬಸ್ (Private Bus Ticket) ಶಾಕ್ ನೀಡಿದ್ದು, ಹಿಂದಿನ ವರ್ಷಕ್ಕಿಂತಲೂ ಈ ಬಾರಿ ಟಿಕೆಟ್ ದರ ಭಾರಿ ಏರಿಕೆ ಕಂಡಿದೆ.
ಹಬ್ಬದ ಸೀಸನ್, ವೀಕೆಂಡ್‌ಗಳಲ್ಲಿ ಪ್ರತಿ ಬಾರಿಯೂ ಖಾಸಗಿ ಬಸ್ ದರ ಏರಿಕೆಯಾಗುತ್ತಲೇ ಇದೆ. ಸಾರಿಗೆ ಇಲಾಖೆ ಈ ಸಂಬಂಧ ಕ್ರಮದ ಎಚ್ಚರಿಕೆ ನೀಡಿದ್ದರೂ, ದರ ಏರಿಕೆಗೆ ಕಡಿವಾಣ ಬೀಳುತ್ತಿಲ್ಲ. ಇದರ ಮಧ್ಯೆ ಈ ಬಾರಿಯ ಗಣೇಶ ಹಬ್ಬಕ್ಕೂ ಊರಿಗೆ ಹೊರಟವರಿಗೆ ಮತ್ತೆ ಶಾಕ್ ಎದುರಾಗಿದೆ. ಕಳೆದ ಬಾರಿಗಿಂತಲೂ ಈ ಬಾರಿ ಶೇ.100ರಷ್ಟು ಟಿಕೆಟ್ ದರ ಏರಿಕೆಯಾಗಿದೆ.
ಬೇಕಾಬಿಟ್ಟಿ ದರ ಏರಿಕೆ ಮಾಡದಂತೆ ಆರ್‌ಟಿಒ ಸೂಚನೆ ನಡುವೆಯೇ ಖಾಸಗಿ ಬಸ್‌ಗಳು ದರ ಏರಿಕೆ ಮಾಡಿವೆ. ಗಣೇಶ ಹಬ್ಬ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಜನ ತಮ್ಮ ಊರುಗಳಿಗೆ ಪ್ರಯಾಣ ಮಾಡುವುದನ್ನೇ ಬಂಡವಾಳ ಮಾಡಿಕೊಂಡು ದರ ಏರಿಕೆ ಮಾಡುವ ಮೂಲಕ ಪ್ರಯಾಣಿಕರಿಗೆ ಬರೆ ಹಾಕುತ್ತಿವೆ.
ಕಳೆದ ಬಾರಿ 500 ರಿಂದ 700 ರೂ. ಇದ್ದ ಟಿಕೆಟ್ ದರ 3,500 ರಿಂದ 4,000 ರೂಗೆ ಏರಿಕೆಯಾಗಿದೆ. ಬಸ್ ಪ್ರಯಾಣ ದರ ವಿಮಾನ ದರ ಸರಿಸಮಾನಾಗಿ ಏರಿಕೆಯಾಗಿದ್ದು, ಪ್ರಯಾಣಿಕರು ಚಿಂತೆಗೀಡಾಗಿದ್ದಾರೆ. ‘ಡಿಸೇಲ್, ನಿರ್ವಹಣೆ, ಬಿಡಿ ಭಾಗ ಸೇರಿದಂತೆ ತೆರಿಗೆ ಹೆಚ್ಚಳ ಹಿನ್ನೆಲೆ ಬೇರೆ ಆಯ್ಕೆ ಇಲ್ಲ. ದರ ಏರಿಕೆ ಮಾಡಲೇಬೇಕಿದೆ’ ಅಂತ ಖಾಸಗಿ ಸಾರಿಗೆ ಒಕ್ಕೂಟ ದರ ಏರಿಕೆಯನ್ನು ಸಮರ್ಥಿಸಿಕೊಂಡಿದೆ.

