ಮುಂಬೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪಾಲ್ಗೊಳ್ಳಲಿರುವ ಕಾರ್ಯಕ್ರಮದ ಸ್ಥಳದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಇಬ್ಬರನ್ನ ಮುಂಬೈ ಪೊಲೀಸರು (Mumbai Police) ವಶಕ್ಕೆ ಪಡೆದುಕೊಂಡಿದ್ದಾರೆ.
ಅವರಲ್ಲಿ ಒಬ್ಬನ ಬಳಿ ಬಂದೂಕು ಪತ್ತೆಯಾಗಿದ್ದು, ಮತ್ತೊಬ್ಬ ತನ್ನನ್ನ ಪ್ರಧಾನಮಂತ್ರಿ ಕಚೇರಿಯ (PMO) ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ. ಆದರೆ ಪರಿಶೀಲನೆ ವೇಳೆ ಆತ ಹೊಂದಿದ್ದ ಗುರುತಿನ ಚೀಟಿ ನಕಲಿ ಎಂಬುದು ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿ ಭಾಗವಹಿಸುವುದಕ್ಕೆ ಮುನ್ನವೇ ಈ ಬೆಳವಣಿಗೆ ಭದ್ರತಾ ಆತಂಕ ಹೆಚ್ಚಿಸಿದೆ.
ಮುಂಬೈನ (Mumbai) ಬಾಂದ್ರಾ–ಕುರ್ಲಾ ಸಂಕೀರ್ಣದಲ್ಲಿರುವ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ (NMACC) ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಆಯೋಜನೆಗೊಂಡಿದೆ. ಕಾರ್ಯಕ್ರಮಕ್ಕೆ ಕೆಲವೇ ಗಂಟೆಗಳಿಗೂ ಮುನ್ನ ಈ ಘಟನೆ ನಡೆದಿರುವುದು ಭದ್ರತಾ ವ್ಯವಸ್ಥೆಯಲ್ಲಿ ಆತಂಕ ಮೂಡಿಸಿದೆ.

ಸಿಕ್ಕಿಬಿದ್ದಿದ್ದು ಹೇಗೆ?
ಮುಂಬೈ ಪೊಲೀಸರ ಮಾಹಿತಿ ಪ್ರಕಾರ, ಕಾರ್ಯಕ್ರಮದ ಸ್ಥಳದಲ್ಲಿ ಓರ್ವ ವ್ಯಕ್ತಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ. ಕೂಡಲೇ ಆತನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಆತನೊಂದಿಗೆ ಬಂದಿದ್ದ ಅಂಗರಕ್ಷಕನನ್ನೂ ವಶಕ್ಕೆ ಪಡೆದು ವಿಚಾರಿಸಿದ್ದಾರೆ. ವಶಕ್ಕೆ ಪಡೆದ 24 ವರ್ಷದ ರೋಹನ್ ಪಾರೇಖ್ ಎಂಬಾತ ತಾನು ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಆತನ ಐಡಿ ಕಾರ್ಡ್ ಪರಿಶೀಲಿಸಿದಾಗ, ಗುರುತಿನ ಚೀಟಿ ನಕಲಿ ಎಂಬುದು ಪತ್ತೆಯಾಗಿದೆ. ಇದೇ ವೇಳೆ ರೋಹನ್ ಪಾರೇಖ್ನೊಂದಿಗೆ ಇದ್ದ ಆತನ ಅಂಗರಕ್ಷಕನ ಬಳಿ ಬಂದೂಕು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಕೆಲವೇ ಗಂಟೆಗಳ ಮುನ್ನ ನಡೆದಿರುವುದರಿಂದ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಇಬ್ಬರು ಬಂದೂಕು ಮತ್ತು ನಕಲಿ ಗುರುತಿನ ಚೀಟಿಗಳೊಂದಿಗೆ ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶಿಸಲು ಯತ್ನಿಸಿದ್ದರ ಹಿಂದಿನ ಉದ್ದೇಶವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಶಕ್ಕೆ ಪಡೆದ ಇಬ್ಬರ ಮೊಬೈಲ್ ದೂರವಾಣಿಗಳು, ಗುರುತಿನ ದಾಖಲೆಗಳು ಹಾಗೂ ಇತರ ವಸ್ತುಗಳನ್ನ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಆರೋಪಗಳಿಗೆ ಸಂಬಂಧಿಸಿದ ಅಂಶಗಳನ್ನು ತನಿಖೆಯ ವೇಳೆ ಪರಿಶೀಲಿಸಿದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ಲೋಬಲ್ ಫಿನ್ಟೆಕ್ ಫೆಸ್ಟ್ 2026
ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗ್ಲೋಬಲ್ ಫಿನ್ಟೆಕ್ ಫೆಸ್ಟ್ (GFF) 2026 ಅನ್ನು ಉದ್ಘಾಟಿಸಲಿದ್ದಾರೆ. ಇದು ವಿಶ್ವದ ಅತಿದೊಡ್ಡ ಹಾಗೂ ಪ್ರಭಾವಶಾಲಿ ವಾರ್ಷಿಕ ಫಿನ್ಟೆಕ್ ಸಮ್ಮೇಳನಗಳಲ್ಲಿ ಒಂದಾಗಿದೆ.
ನಾಲ್ಕು ದಿನಗಳ ಕಾಲ ನಡೆಯಲಿರುವ GFF 2026ರ ಈ ಬಾರಿಯ ಥೀಮ್: “Potential to Impact: Agentic AI, Tokenisation, Quantum – Trusted, Connected, Global Systems for Inclusive Finance.” ಆಗಿದೆ.
