ಮಂಡ್ಯ: ಮುಂಬರುವ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆಗಳು (Mandya police) ನಡೆಯದಂತೆ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
ಕಳೆದ ವರ್ಷಗಳಲ್ಲಿ ನಡೆದ ಕಹಿ ಘಟನೆಗಳು ಈ ಬಾರಿ ಮರುಕಳಿಸದಂತೆ ತಡೆಯಲು ಕಿಡಿಗೇಡಿಗಳಿಗೆ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಿದ್ದಾರೆ.
2024ರಲ್ಲಿ ನಾಗಮಂಗಲ ಹಾಗೂ ಕಳೆದ ವರ್ಷ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಿಡಿಗೇಡಿಗಳು ಮೂರ್ತಿ ಮೇಲೆ ಕಲ್ಲು ತೂರಿ ಗಲಭೆ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರು ಮದ್ದೂರಿನಲ್ಲಿ ಸಾರ್ವಜನಿಕರ ಹಾಗೂ ಮುಖಂಡರ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಪೊಲೀಸ್ ಇಲಾಖೆಯ ಪ್ರಮುಖ ಸೂಚನೆಗಳು
ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸಮಾಜಘಾತುಕ ಶಕ್ತಿಗಳ ಪ್ರತಿಯೊಂದು ಚಲನವಲನದ ಮೇಲೂ ಪೊಲೀಸರು ನಿಗಾ ಇರಿಸಲಿದ್ದಾರೆ.ಇದನ್ನೂ ಓದಿ: ಬೈ ಬೈ ಪಪ್ಪಾ ಎಂದು ಚೆನಾಬ್ ನದಿಗೆ ಜಿಗಿದ ಯುವತಿ – ವಿಡಿಯೋ ವೈರಲ್
ಹಿಂದಿನ ಗಲಭೆಗಳಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಂದ ಕಿಡಿಗೇಡಿಗಳು ಬಂದು ಕಲ್ಲು ತೂರಾಟ ನಡೆಸಿರುವುದು ಕಂಡುಬಂದಿತ್ತು. ಹಾಗಾಗಿ ಈ ಬಾರಿ ಅಪರಿಚಿತರು ಹಾಗೂ ಹೊರಗಿನ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಸದಾ ಜಾಗರೂಕರಾಗಿರಬೇಕು.
ಗಣೇಶ ವಿಸರ್ಜನಾ ಮೆರವಣಿಗೆಯು ಪೊಲೀಸ್ ಇಲಾಖೆ ನಿಗದಿಪಡಿಸಿದ ಮಾರ್ಗದಲ್ಲೇ ಸಾಗಬೇಕು. ಯಾವುದೇ ಕಾರಣಕ್ಕೂ ಮಾರ್ಗ ಬದಲಾವಣೆಗೆ ಅವಕಾಶವಿಲ್ಲ.
ಉತ್ಸವ ಸಮಿತಿಯವರು ಹಾಗೂ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿ, ಅವರ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದನ್ನೂ ಓದಿ: ಡಿವೈಡರ್‌ಗೆ ಕಾರು ಡಿಕ್ಕಿ – ತಿಮ್ಮಪ್ಪನ ದರ್ಶನ ಪಡೆದು ವಾಪಸ್ಸಾಗ್ತಿದ್ದ ಒಂದೇ ಕುಟುಂಬದ ನಾಲ್ವರು ಸಾವು
ಹಬ್ಬವನ್ನು ಸೌಹಾರ್ದಯುತವಾಗಿ ಹಾಗೂ ಶಾಂತಿಯುತವಾಗಿ ಆಚರಿಸುವ ಉದ್ದೇಶದಿಂದ ಸಾರ್ವಜನಿಕರ ಸಹಕಾರ ಕೋರಿರುವ ಪೊಲೀಸರು, ಮುಂದಿನ ದಿನಗಳಲ್ಲಿ ಮತ್ತೊಂದು ಹಂತದ ಶಾಂತಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ಎಚ್ಚರಿಸಿದೆ.
