ಇಸ್ಲಾಮಾಬಾದ್: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಜೊತೆಗಿನ ಸಂಘರ್ಷವನ್ನು ತಪ್ಪಿಸಲು ಪಾಕಿಸ್ತಾನ್ ಸೂಪರ್ ಲೀಗ್ (PSL) 2027ರ ಆವೃತ್ತಿಯನ್ನು ಜನವರಿ-ಫೆಬ್ರವರಿ ಅವಧಿಗೆ ಸ್ಥಳಾಂತರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಚಿಂತನೆ ನಡೆಸಿದೆ.
2016ರಲ್ಲಿ ಆರಂಭವಾದ ಪಿಎಸ್ಎಲ್ ಸಾಮಾನ್ಯವಾಗಿ ಪ್ರತಿವರ್ಷ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯುತ್ತಿತ್ತು ಮತ್ತು ಐಪಿಎಲ್ ಆರಂಭವಾಗುವ ಮುನ್ನವೇ ಮುಕ್ತಾಯಗೊಳ್ಳುತ್ತಿತ್ತು. ಆದರೆ 2025ರಲ್ಲಿ ಆಯೋಜಿಸಲಾಗಿದ್ದ ಚಾಂಪಿಯನ್ಸ್ ಟ್ರೋಫಿ ಕಾರಣದಿಂದಾಗಿ ಟೂರ್ನಿಯನ್ನು ಏಪ್ರಿಲ್-ಮೇ ಅವಧಿಗೆ ಮುಂದೂಡಲಾಗಿತ್ತು. 2026ರ ಆವೃತ್ತಿಯೂ ಇದೇ ಅವಧಿಯಲ್ಲಿ ನಡೆದಿದ್ದರಿಂದ ನೇರವಾಗಿ ಐಪಿಎಲ್ ಜತೆಯೇ ಸೆಣಸಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪಿಎಸ್ಎಲ್ನ ಮಾಧ್ಯಮ ಹಕ್ಕುಗಳನ್ನು ಹೊಂದಿರುವ ವಾಲಿ ಟೆಕ್ನಾಲಜೀಸ್ ಸಂಸ್ಥೆಯು ಟೂರ್ನಿಯನ್ನು ಜನವರಿ-ಫೆಬ್ರವರಿಗೆ ಸ್ಥಳಾಂತರಿಸುವಂತೆ ಪ್ರಸ್ತಾವನೆ ಸಲ್ಲಿಸಿದೆ ಎಂದು ವರದಿಯಾಗಿದೆ. ಐಪಿಎಲ್ ನಡೆಯುವ ಸಮಯದಲ್ಲಿ ಪಿಎಸ್ಎಲ್ಗೆ ಜಾಹೀರಾತುದಾರರ ಕೊರತೆ ಎದುರಾಗುತ್ತಿದೆ ಎಂದು ಪ್ರಸಾರಕರು ದೂರು ನೀಡಿದ್ದರಿಂದ ಬದಲಾವಣೆ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಯಾವ್ದೇ ಕಾರಣಕ್ಕೂ RCB ಹೆಸರು ಬದಲಾಗಲ್ಲ – ಮಾಲೀಕ ಆರ್ಯಮನ್ ಬಿರ್ಲಾ ಖಡಕ್ ಮಾತು

ಪವಿತ್ರ ರಂಜಾನ್ ಮಾಸದ ಬೆನ್ನಲ್ಲೇ ಟೂರ್ನಿ ಬರುವುದರಿಂದ ಬಹುತೇಕ ಕಂಪನಿಗಳ ಮಾರ್ಕೆಟಿಂಗ್ ಬಜೆಟ್ ಮುಗಿದಿರುತ್ತದೆ ಎಂದು ವರದಿ ಉಲ್ಲೇಖಿಸಿದೆ. ಮತ್ತೊಂದೆಡೆ, ಪಾಕಿಸ್ತಾನ ರಾಷ್ಟ್ರೀಯ ತಂಡದ ಕಳಪೆ ಪ್ರದರ್ಶನದಿಂದಾಗಿ ಲೀಗ್ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಫ್ರಾಂಚೈಸಿ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಜತೆ ಕ್ಲ್ಯಾಶ್ ಆದಾಗ ಪ್ರಮುಖ ಅಂತಾರಾಷ್ಟ್ರೀಯ ಆಟಗಾರರು ಅಲಭ್ಯರಾದರೂ, ಐಪಿಎಲ್ ಹರಾಜಿನಲ್ಲಿ ಅನ್ಸೋಲ್ಡ್ ಆದ ಆಟಗಾರರನ್ನು ಸೆಳೆಯಲು ಪಿಎಸ್ಎಲ್ಗೆ ಸಾಧ್ಯವಾಗುತ್ತಿತ್ತು. ಆದರೆ ಜನವರಿ-ಫೆಬ್ರವರಿಗೆ ಸ್ಥಳಾಂತರಗೊಂಡರೆ, ಬಿಗ್ ಬ್ಯಾಷ್ ಲೀಗ್ (BBL), ಎಸ್ಎ20 (SA20) ಮತ್ತು ಐಎಲ್ಟಿ20 (ILT20) ಲೀಗ್ಗಳ ಜತೆ ಆಟಗಾರರಿಗಾಗಿ ಪೈಪೋಟಿ ನಡೆಸಬೇಕಾಗುತ್ತದೆ. ಅಲ್ಲದೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಿರತರಾಗಿರುವ ಆಟಗಾರರ ಕೊರತೆಯೂ ಕಾಡಲಿದೆ.
ಜನವರಿಯಲ್ಲಿ ಪಾಕಿಸ್ತಾನದಲ್ಲಿ(Pakistan) ತೀವ್ರ ಚಳಿ ಇರುವುದರಿಂದ ಪಂದ್ಯಗಳ ಆಯೋಜನೆ ಮತ್ತೊಂದು ದೊಡ್ಡ ತಲೆನೋವಾಗಿದೆ. ಪಿಎಸ್ಎಲ್ನ ಪ್ರಮುಖ ಕ್ರೀಡಾಂಗಣಗಳಾದ ಲಾಹೋರ್, ರಾವಲ್ಪಿಂಡಿ ಮತ್ತು ಮುಲ್ತಾನ್ಗಳಲ್ಲಿ ಚಳಿಗಾಲ ತೀವ್ರವಾಗಿರುತ್ತದೆ. ಹೀಗಾಗಿ ಆರಂಭಿಕ ಹಂತದ ಪಂದ್ಯಗಳನ್ನು ಕರಾಚಿಯಲ್ಲಿ ನಡೆಸಿ, ಚಳಿಯ ತೀವ್ರತೆ ಕಡಿಮೆಯಾದ ನಂತರ ಉಳಿದ ಕ್ರೀಡಾಂಗಣಗಳಿಗೆ ಸ್ಥಳಾಂತರಿಸುವ ಯೋಜನೆಯನ್ನು ಪರಿಶೀಲಿಸಲಾಗುತ್ತಿದೆ.
